Chikkaballapur : ಐತಿಹಾಸಿಕ ನಂದಿಗಿರಿಧಾಮವು ರಾಜ್ಯದ ಗಮನಸೆಳೆಯುತ್ತಿರುವಂತೆ, ಇದೇ ಜೂನ್ 19 ರಂದು ಇಲ್ಲಿಯಲ್ಲೇ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಕಲ ಸಿದ್ಧತೆಗಳು ಆರಂಭಗೊಂಡಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನವಾದ ವೇಳೆ, ನಾನು ಮುಖ್ಯಮಂತ್ರಿ ಅವರಿಗೆ ನಂದಿಗಿರಿಧಾಮದಲ್ಲಿಯೂ ಸಭೆ ನಡೆಸುವಂತೆ ಪತ್ರ ನೀಡಿದ್ದೆ. ಗಾಂಧೀಜಿಯವರು ಈ ಪುಣ್ಯಭೂಮಿಗೆ ಎರಡು ಬಾರಿ ಭೇಟಿ ನೀಡಿರುವ ಇತಿಹಾಸವಿದೆ,” ಎಂದು ಉಲ್ಲೇಖಿಸಿದರು.
“ಇತ್ತೀಚೆಗಷ್ಟೆ ಮುಖ್ಯಮಂತ್ರಿ ಅವರು ನನ್ನೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಂದಿಬೆಟ್ಟದಲ್ಲಿ ಜೂನ್ 19ರಂದು ಸಭೆ ನಡೆಸಬಹುದೇ ಎಂದು ಮಾಹಿತಿ ಪಡೆದರು. ನಾವು ಕೂಡ ಸಿದ್ಧತೆ ನಡೆಸುತ್ತಿದ್ದೇವೆ. ಯಾವProgrammeಗಳೂ ಅಂದು ಇಲ್ಲದಿದ್ದರೆ, ನಿಶ್ಚಿತವಾಗಿಯೇ 19ರಂದು ಸಭೆ ನಡೆಯಲಿದೆ,” ಎಂದು ಸ್ಪಷ್ಟಪಡಿಸಿದರು.
ಈ ಸಭೆಯು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ದಿನವಾಗಲಿದೆ. ಈ ಭಾಗಗಳಿಗೆ ಬೇಕಾದ ಅನುದಾನ, ಯೋಜನೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದೂ ಅವರು ವಿವರಿಸಿದರು.