Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮೊಟ್ಲೂರು ಗ್ರಾಮದಲ್ಲಿ ಸೋಮವಾರ ಕೆ.ಎಸ್. ನಿಸಾರ್ ಅಹಮದ್ (K.S. Nisar Ahmed) ಅವರ ಪುತ್ಥಳಿ ಅನಾವರಣ ಹಾಗೂ ನಿಸಾರ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್‌ಗೆ (Nisar Institute of Education Trust) ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ (R. Ashoka) ಕೆ.ಎಸ್.ನಿಸಾರ್ ಅಹಮದ್ ಅವರ ಪುತ್ಥಳಿ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂದ್ದ್ಯ ಸಚಿವ ಅಶೋಕ್ “ಸಾಹಿತಿ ದಿ| ಕೆ.ಎಸ್.ನಿಸಾರ್ ಅಹಮದ್ ಅವರ ನೆನಪಿನಲ್ಲಿ ನಿಸಾರ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಹಾಗೂ ಸ್ಮಾರಕ ನಿರ್ಮಾಣವಾಗುತ್ತಿದ್ದು ಈ ವಿದ್ಯಾ ಕೇಂದ್ರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಕಲಿಕೆಯ ಆಸಕ್ತಿಯುಳ್ಳವರಿಗೆ ಸಾಹಿತ್ಯ, ಸಂಗೀತ, ನೃತ್ಯ ಕಲಿಯಲು ಉತ್ತಮ ವೇದಿಕೆ ಆಗಲಿದೆ. ಕನ್ನಡ ಸಾಹಿತ್ಯಕ್ಕೆ ನಿಸಾರ್ ರ ಕೊಡುಗೆ ಅಪಾರ ಅವರು ರಚಿಸಿರುವ ‘ನಿತ್ಯೋತ್ಸವ‘ ಕವನ ಪ್ರತಿಕನ್ನಡಿಗರು ಮರೆಯಲು ಅಸಾಧ್ಯ” ಎಂದು ಹೇಳಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, “ಕವಿಗೆ ಹಾಗೂ ಕವನಗಳಿಗೆ ಎಂದಿಗೂ ಸಾವಿಲ್ಲ ಎಂಬುದಕ್ಕೆ ನಿಸಾರ್ ಅಹಮದ್ ರಚಿಸಿರುವ ಗೀತೆಗಳು, ಕವನಗಳೇ ಸಾಕ್ಷಿ. ನಿಸಾರ್ ಅಹಮದ್ ಅವರ ಹೆಸರಲ್ಲಿ ಸಂಸ್ಥೆ ಪ್ರಕೃತಿ ಸೊಬಗಿನಲ್ಲಿ ಸ್ಥಾಪನೆಯಾಗುತ್ತಿರುವುದು ನಮ್ಮ ಭಾಗದ ಭಾಗ್ಯ. ಸರ್ಕಾರ ಸ್ಮಾರಕ ನಿರ್ಮಿಸಲು ಜಮೀನು ನೀಡಿರುವಂತೆಯೇ ಈ ಶಿಕ್ಷಣ ಸಂಸ್ಥೆಯ ಕಟ್ಟಡ, ವಸ್ತುಸಂಗ್ರಹಾಲಯ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಪೂರ್ಣ ಸಹಕಾರ ನೀಡಲಿದೆ” ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಕವಿ ಬಿ.ಆರ್. ಲಕ್ಷ್ಮಣರಾವ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ನಿಸಾರ್ ಅಹಮದ್ ಅವರ ಕುಟುಂಬ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.