Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿನ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ (Panchagiri High school) ಮಂಗಳವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ವಾಯುಮಾಲಿನ್ಯದ ವಿರುದ್ಧ ಸಮರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಮಾತನಾಡಿ, “18 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳು ವಾಹನ ಚಲಾಯಿಸಬಾರದು. ಹೆಚ್ಚು ಹೊಗೆ ಬಿಡುಗಡೆ ಮಾಡುವ ವಾಹನಗಳನ್ನು ಬಳಕೆ ಮಾಡುವುದು ತಡೆಯಬೇಕು. ವಾಯುಮಾಲಿನ್ಯ ನಿಯಂತ್ರಣ ಜಾಗೃತಿಯು ನವೆಂಬರ್‌ನಲ್ಲಿ ಮತ್ತು ಡಿಸೆಂಬರ್‌ನಲ್ಲಿ ನಡೆಯುವ ವಾಹನ ತಪಾಸಣಾ ಕಾರ್ಯಕ್ರಮದ ಭಾಗವಾಗಿದೆ. ವಿದ್ಯಾರ್ಥಿಗಳಲ್ಲಿ ಈ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯ” ಎಂದರು.
ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಶಾಲೆ ಮತ್ತು ಬಸ್ ನಿಲ್ದಾಣಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
SLV ಟ್ರಾವೆಲ್ಸ್ ಮಾಲೀಕ ನವಮೋಹನ್, ಕಾರ್ಯಕ್ರಮದ ಅಂಗವಾಗಿ ಉತ್ತಮ ಚಿತ್ರಕಲೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ನಾರಾಯಣಸ್ವಾಮಿ, ಶಿಕ್ಷಕರಾದ ಮಹಾಂತೇಶ್, ತಿಮ್ಮಣ್ಣ ಭಟ್, ಕೆ. ನರಸಿಂಹಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.