Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ “ಮಕ್ಕಳ ದಿನಾಚರಣೆ” ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಯಮನಪ್ಪ ಕರೆಹನುಮಂತಪ್ಪ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ಸಾಮಾಜಿಕವಾಗಿ ಅವರ ಬೆಳವಣಿಗೆಗೆ ಒಳ್ಳೆಯ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳ ದಿನಾಚರಣೆಗೆ ಅರ್ಥ ಕಲ್ಪಿಸಬೇಕಾಗಿದೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಇಡೀ ಸಮಾಜದ ಹೊಣೆ ಇದೆ. ಅವರ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕಿಂತ ಮಹತ್ವದ ಕೆಲಸ ಬೇರೊಂದಿಲ್ಲ. ಆರ್ಥಿಕ ಸಮಸ್ಯೆ ಅಥವಾ ಇನ್ಯಾವುದೋ ಕಾರಣದಿಂದ ಈಗಲೂ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತ ರಾಗುತ್ತಿರುವುದು ಅತ್ಯಂತ ಬೇಸದ ಸಂಗತಿ. ಪ್ರತಿ ಮಗುವಿಗೂ ಆದರ ಹಕ್ಕು ಲಭಿಸುವಂತಾಗಬೇಕು. ಅದರಲ್ಲೂ ಮುಖ್ಯವಾಗಿ ಶಿಕ್ಷಣದ ಹಕ್ಕು ಬಹು ಮುಖ್ಯ. ಇದು ಸಂವಿಧಾನದ ಆಶಯವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕಿಂತ ಬೇರೆ ಪುಣ್ಯ ಇನ್ನೊಂದಿಲ್ಲ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ಮಕ್ಕಳು ಆಯಾ ಪಾಲಕರ ವೈಯಕ್ತಿಕ ಆಸ್ತಿಯಲ್ಲ. ಅವರು ದೇಶದ ಆಸ್ತಿ, ಪಾಲಕರು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡದೇ ಅವರ ಇಚ್ಛೆ ಅರಿತು ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡಬೇಕು. ಶಾಲೆಯಿಂದ ವಂಚಿತರಾದ, ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು. ಸರ್ಕಾರ ಮಕ್ಕಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಯೋಜನೆಗಳು ಸರಿಯಾಗಿ ಜಾರಿಯಾಗಬೇಕು. ಪಾಲಕರು ಮಕ್ಕಳ ಜತೆಗೆ ಹೆಚ್ಚು ಕಾಲ ಕಳೆಯುವುದನ್ನು ರೂಢಿಸಬೇಕು. ಮಕ್ಕಳ ಚಲನವಲನಗಳ ಮೇಲೆ ಪಾಲಕರು ನಿಗಾ ಇಡುವುದು ಅತಿ ಮುಖ್ಯ ಎಂದರು.
ಈ ವೇಳೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನಾದ್ಯಂತ ಜನನಪ್ರಮಾಣಪತ್ರವನ್ನು ಹೊಂದಿರದ 3,850 ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ನ್ಯಾಯಾಲಯದ ವರಿಯಿಂದ ಉಚಿತವಾಗಿ ಜನನಪ್ರಮಾಣಪತ್ರಗಳನ್ನು ಮಾಡಿಸಿ ವಿತರಿಸಲಾಯಿತು. ಕಾನೂನು ಸೇವಾ ಸಮಿತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ.ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಮುಖ್ಯಶಿಕ್ಷಕ ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.