Chintamani : ಚಿಂತಾಮಣಿ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ತಿಂಗಳ ಹಿಂದೆ ರಾತ್ರೋರಾತ್ರಿ ತಂದು ಇಟ್ಟಿದ್ದ ಅಂಬೇಡ್ಕರ್ ಪುತ್ಥಳಿಯನ್ನು ನ್ಯಾಯಾಲಯದ ಆದೇಶದಂತೆ ಬುಧವಾರ ನಸುಕಿನಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿರುವುದನ್ನು ಖಂಡಿಸಿ ಕೆಲವು ದಲಿತಪರ ಸಂಘಟನೆಗಳು ಮೇ 22 ಗುರುವಾರ ಚಿಂತಾಮಣಿ ಬಂದ್‌ಗೆ (Chintamani Bundh) ಕರೆ ನೀಡಿವೆ.
ಒಂದು ಬಣದವರು ತಾಲ್ಲೂಕು ಮತ್ತು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರೆ ಮತ್ತೊಂದು ಬಣ ಆರಂಭದಿಂದ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ. ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋರಾತ್ರಿ ತಾಲ್ಲೂಕು ಆಡಳಿತ ತೆರವುಗೊಳಿಸಿದ್ದನ್ನು ಖಂಡಿಸಿ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಕರೆ ನೀಡಿರುವ ಬಂದ್‌ಗೆ ಕ್ಷೇತ್ರದ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬೆಂಬಲ ಘೋಷಿಸಿದ್ದಾರೆ.
ಚಿಂತಾಮಣಿ ನಗರದಲ್ಲಿ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ಬಂದ್ ನಡೆಸಲು ಅವಕಾಶವಿಲ್ಲ ಎಂದು ಬುಧವಾರ ಸಂಜೆ ನಡೆದ ಪೊಲೀಸ್ ಪಥಸಂಚಲನದ ನಂತರ ಸುದ್ದಿಗಾರರೊಂದಿಗೆ ಜಿಲ್ಲಾ ಹೆಚ್ಚುವರಿ ಎಸ್‌ಪಿ ಜಗನ್ನಾಥ ರೈ ತಿಳಿಸಿದರು.