Chintamani : ಚಿಂತಾಮಣಿ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ತಿಂಗಳ ಹಿಂದೆ ರಾತ್ರೋರಾತ್ರಿ ತಂದು ಇಟ್ಟಿದ್ದ ಅಂಬೇಡ್ಕರ್ ಪುತ್ಥಳಿಯನ್ನು ನ್ಯಾಯಾಲಯದ ಆದೇಶದಂತೆ ಬುಧವಾರ ನಸುಕಿನಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿರುವುದನ್ನು ಖಂಡಿಸಿ ಕೆಲವು ದಲಿತಪರ ಸಂಘಟನೆಗಳು ಮೇ 22 ಗುರುವಾರದಂದು ಕರೆ ನೀಡಿದ ಚಿಂತಾಮಣಿ ಬಂದ್‌ಗೆ ಮಿಶ್ರ ಪ್ರತಿಕ್ರಯೆ (Chintamani Bundh Response) ವ್ಯಕ್ತವಾಗಿದೆ.
ಚಿಂತಾಮಣಿ ನಗರದಲ್ಲಿ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ಬಂದ್, ಪ್ರತಿಭಟನೆ, ಮೆರವಣಿಗೆ, ಧರಣಿ, ಸರ್ಕಾರಿ ಕಚೇರಿಗಳ ಮುಂದೆ ಗಲಾಟೆ ಮಾಡಿದರೆ ಕಾನೂನಿನಂತೆ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಎಸ್‌ಪಿ ಜಗನ್ನಾಥ ರೈ ಎಚ್ಚರಿಸಿದ್ದರು. ಗುರುವಾರ ಬೆಳಗ್ಗೆ ಎಂಟು ಗಂಟೆಗೆ ನಗರದ ಜೋಡಿ ರಸ್ತೆ, ಬಾಗೇಪಲ್ಲಿ ರಸ್ತೆ, ಬೆಂಗಳೂರು ರಸ್ತೆ, ಕೋಲಾರ ರಸ್ತೆ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಕೆಲ ಅಂಗಡಿಗಳನ್ನು ತೆರೆಯಲಾಗಿತ್ತು. ದಲಿತ ಮುಖಂಡರು ಹಾಗೂ ಪದಾಧಿಕಾರಿಗಳು ದ್ವಿಚಕ್ರ ವಾಹನಗಳಲ್ಲಿ ಜೈ ಭೀಮ್ ಎಂಬ ಘೋಷಣೆ ಕೂಗುತ್ತಾ ಅಂಗಡಿ ಬಂದ್ ಮಾಡಿ ಚಿಂತಾಮಣಿ ಬಂದ್‌ಗೆ ಸಹಕರಿಸಿ ಎಂದು ಹೇಳುತ್ತಿದ್ದರು.
ದಲಿತ ಮುಖಂಡ ಎಂ.ವಿ ರಾಮಪ್ಪ, ಸಂತೋಷ್, ಜನಾರ್ದನ್, ವೆಂಕಟರವಣಪ್ಪ, ನರಸಿಂಹಪ್ಪ ಅವರನ್ನು ಪೊಲೀಸರು ಬಂಧಿಸಿ ಕೆಂಚರ್ಲಹಳ್ಳಿ, ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಗೆ ಕರೆದೊಯ್ದರು. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ವಾಹನ ಸಂಚಾರ ಎಂದಿನಂತೆ ಇತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್, ಅಂಚೆ ಕಚೇರಿ, ಸರ್ಕಾರಿ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜನಜೀವನ ಸಾಮಾನ್ಯವಾಗಿತ್ತು.