Chintamani : ಚಿಂತಾಮಣಿ ತಾಲ್ಲೂಕಿನ ಕೇತನಾಯಕನಹಳ್ಳಿ, ಕೈವಾರ (Kaiwara), ಕದಿರಾಪುರ ಹಾಗೂ ಬ್ಯಾಲಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ ‘ಶುದ್ಧ ಕುಡಿಯುವ ನೀರಿನ ಘಟಕ’ (Drinking water plant) ವನ್ನು ಭಾನುವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (Dr MC Sudhakar) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ “ತಾಲ್ಲೂಕಿನಲ್ಲಿ ಸುಮಾರು 340 ಗ್ರಾಮಗಳಿದ್ದು 65-70 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. 2012-13ರಲ್ಲೆ ಸರ್ಕಾರದಿಂದ 8 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಆಗಿತ್ತು. ‘ಇಂಡೋ ಎಂಐಎಂ’ ಕಂಪನಿ 4 ಘಟಕ ನೀಡಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ವಿನೂತನ ವಿನ್ಯಾಸದ 9 ಘಟಕ ನೀಡಲಾಗಿದೆ. ಜಿಲ್ಲಾ ಗಣಿಗಾರಿಕೆ ನಿಗಮದಿಂದ ₹1 ಕೋಟಿ ವೆಚ್ಚದಲ್ಲಿ 13 ಘಟಕ ಮಂಜೂರು ಮಾಡಿಸಿದೆ. ಈ ವರ್ಷದ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ 9 ಘಟಕ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರ ಯೋಜನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಆದರೇ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಶೇ 55, ಕೇಂದ್ರ ಸರ್ಕಾರದ ಪಾಲು ಶೇ 45 ರಷ್ಟು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾಬ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಂ.ಗೋವಿಂದಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪ, ಮಂಜುನಾಥ್ ಭಾಗವಹಿಸಿದ್ದರು.