Chintamani : ಚಿಂತಾಮಣಿ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರ ಪ್ರಗತಿ ಪರಿಶೀಲನಾ ಸಭೆ (KDP Meeting) ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಸುದರ್ಶನ ಯಾದವ್ “ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಅತ್ಯಂತ ಹಿಂದುಳಿದವರಾಗಿದ್ದು, ಪ್ರತಿ ಇಲಾಖೆಯ ಸರ್ಕಾರಿ ಸೌಲಭ್ಯವನ್ನು ಆದ್ಯತೆಯ ಮೇರೆಗೆ ಅವರಿಗೆ ತಲುಪಿಸಬೇಕು. ಕೆಲವು ಇಲಾಖೆಗಳಲ್ಲಿ ಸೌಲಭ್ಯಗಳನ್ನು ತಲುಪಿಸುವಲ್ಲಿ ತೃಪ್ತಿಕರವಾಗಿ ಪ್ರಗತಿಯಾಗಿಲ್ಲ. ನಗರ ಮತ್ತು ತಾಲ್ಲೂಕಿನಾದ್ಯಂತ ಇರುವ ವಸತಿ, ನಿವೇಶನ ರಹಿತರನ್ನು ಪಟ್ಟಿ ಮಾಡಿ ಅವರಿಗೆ ನಿವೇಶನಗಳನ್ನು ಒದಗಿಸಲು ಸರ್ಕಾರಕ್ಕೆ ವರದಿ ಕಳುಹಿಸುತ್ತೇನೆ. ಸಮುದಾಯದವರಿಗೆ ಸಿಗುವ ಇತರೆ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ವಿಸ್ತರಣಾಧಿಕಾರಿ ಮಂಜುನಾಥ್, ಸಮಾಜಕಲ್ಯಾಣಾಧಿಕಾರಿ ಶ್ರೀನಿವಾಸನಾಯಕ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುರೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ರಾಮಚಂದ್ರಾರೆಡ್ಡಿ, ಪಶುಪಾಲನಾ ಇಲಾಖೆಯ ಡಾ.ಚೆನ್ನಕೇಶವರೆಡ್ಡಿ, ಆಹಾರ ಇಲಾಖೆಯ ಸುಧಾಮಣಿ, ನಗರಸಭೆಯ ಆರತಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಜುನಾಥ್, ಸಾರಿಗೆ ಇಲಾಖೆಯ ದೇವರಾಜ್ ಉಪಸ್ಥಿತರಿದ್ದರು.