Chintamani : ಚಿಂತಾಮಣಿ–ದಿಬ್ಬೂರಹಳ್ಳಿ ರಸ್ತೆಯ ಕೇತನಾಯಕನಹಳ್ಳಿ ಸಮೀಪ ಬುಧವಾರ ಭೀಕರ ಘಟನೆ ಸಂಭವಿಸಿದೆ. ಬೈಕ್ ಹಿಂಬದಿ ಸವಾರಿಯಾಗಿ ಪ್ರಯಾಣಿಸುತ್ತಿದ್ದ ದ್ಯಾವಮ್ಮ (50) ಎಂಬ ಮಹಿಳೆಯ ಸೀರೆಯ ಸೆರಗು ಚಕ್ರಕ್ಕೆ ಸಿಲುಕಿ, ಅವರು ಬೈಕ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೇತನಾಯಕನಹಳ್ಳಿ ನಿವಾಸಿಯಾದ ದ್ಯಾವಮ್ಮಗೆ ನಾಯಿಕಚ್ಚಿನಿಂದ ಗಾಯವಾಗಿದ್ದು, ಚಿಕಿತ್ಸೆಗಾಗಿ ಗಂಜಿಗುಂಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಗೇಶ್ ಎಂಬುವವರು ಅವರನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಪ್ರಯಾಣದ ಮಧ್ಯೆ ಸೀರೆಯ ಸೆರಗು ಚಕ್ರಕ್ಕೆ ಸಿಕ್ಕಿಕೊಂಡ ಪರಿಣಾಮ, ದ್ಯಾವಮ್ಮ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಮತ್ತು ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದ್ಯಾವಮ್ಮ ಅವರ ಶವವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.