Chintamani : ಪ್ರಾಂಶುಪಾಲರ ಸಹಿ ನಕಲು ಮಾಡಿ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ₹68.65 ಲಕ್ಷ ವಿದ್ಯಾರ್ಥಿ ವೇತನದ (Scholarship) ಹಣ ದುರ್ಬಳಕೆ ಮಾಡಿಕೊಂಡ ದ್ವಿತೀಯ ದರ್ಜೆ ಸಹಾಯನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ SFI ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲರ ಖಾತೆಯಿಂದ ದ್ವಿತೀಯ ದರ್ಜೆ ಸಹಾಯಕ ಎನ್.ಸಂತೋಷ್ ಕುಮಾರ್ ತನ್ನ ಸ್ವಂತ ಖಾತೆಗೆ ₹68.65 ಲಕ್ಷವನ್ನು ವರ್ಗಾಯಿಸಿಕೊಂಡು ಪರಾರಿಯಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿ ಹಣದ ಚೆಕ್‌ಗಳನ್ನು ಸಂತೋಷ್ ಕುಮಾರ್ ಖಾತೆಗೆ ವರ್ಗಾಯಿಸುವಾಗ ಪ್ರಾಂಶುಪಾಲರ ಗಮನಕ್ಕೆ ತರದಿರುವುದು ಸಂಶಯಕ್ಕೆ ಕಾರಣವಾಗಿದ್ದು ಬ್ಯಾಂಕಿನ ಸಿಬ್ಬಂದಿ ಶಾಮೀಲಾಗಿರಬಹುದು ಎಂಬ ಅನುಮಾನ ಮೂಡುತ್ತದೆ. ಕೋವಿಡ್ ಸಂದರ್ಭದಲ್ಲಿ ಶುಲ್ಕ ಕಟ್ಟಲು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ತಾಲ್ಲೂಕು ಆಡಳಿತ ಸೂಕ್ತ ತನಿಖೆಗೆ ಆದೇಶಿಸಿ ವಿದ್ಯಾರ್ಥಿ ವೇತನದ ಹಣವನ್ನು ಆರೋಪಿಯಿಂದ ವಸೂಲು ಮಾಡಿ ಆರೋಪಿಯನ್ನು ಬಂಧಿಸಬೇಕು ಎಂದು ಎಸ್.ಎಫ್.ಐ ತಾಲ್ಲೂಕು ಅಧ್ಯಕ್ಷ ಎನ್.ಮನೋಜ್ ಕುಮಾರ್ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್-2 ತಹಶೀಲ್ದಾರ್ ಶೋಭಾ, ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆಯ ಮುಖಂಡರಾದ ವಿ.ಮನೋಹರ್, ಎಸ್.ಗಣೇಶ್, ಸಿಂಧು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur