Chintamani : ಚಿಂತಾಮಣಿ ನಗರದ ಹೊರವಲಯದ ಕರಿಯಪ್ಪಲ್ಲಿ ಬಳಿಯ ರೈಲ್ವೆ ಅಂಡರ್ ಪಾಸ್ ಸಮೀಪದಲ್ಲಿ ಮಂಗಳವಾರ ರಾತ್ರಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಚಲುಮಕೋಟೆ ಗ್ರಾಮದ ಎಂ.ಎನ್.ಮೋಹನ್ (19) ಎಂಬ ಯುವಕ ರೈಲಿಗೆ ಸಿಲುಕಿ (Train Accident) ಮೃತಪಟ್ಟಿದ್ದಾನೆ.
ಬೆಂಗಳೂರಿನಿಂದ ಚಿಕ್ಕಬಳ್ಳಾಪುರ-ಚಿಂತಾಮಣಿ ಮಾರ್ಗವಾಗಿ ಕೋಲಾರಕ್ಕೆ ಹೋಗುವ ರೈಲಿಗೆ ಮಂಗಳವಾರ ರಾತ್ರಿ ಯುವಕ ಸಿಲುಕಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬುಧವಾರ ಬೆಳಿಗ್ಗೆ ರೈಲ್ವೆಹಳಿಗಳ ಬಳಿ ಬಿದ್ದಿರುವ ಶವವನ್ನು ಕಂಡ ಸಾರ್ವಜನಿಕರು ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ನಗರದ ಹೊರವಲಯದ ಕೋಲಾರ ರಸ್ತೆಯಲ್ಲಿರುವ ಅರುಣೋದಯ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೋಹನ್ ಮಂಗಳವಾರ ಬೆಳಿಗ್ಗೆ ಎಂದಿನಂತೆ ಮನೆಯಿಂದ ಕಾಲೇಜಿಗೆ ಹೋಗಿ ಸಂಜೆ 5 ಗಂಟೆ ಸಮಯದಲ್ಲಿ ಮನೆಗೆ ಕರೆ ಮಾಡಿ, ಸ್ನೇಹಿತನ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಬರುವುದು ತಡವಾಗುತ್ತದೆ ಎಂದು ಹೇಳಿದ್ದಾನೆ ಎನ್ನಾಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕಸ್ಮಿಕವಾಗಿ ಸಿಲುಕಿರುವುದೋ ಅಥವಾ ಉದ್ದೇಶಪೂರ್ವಕವಾಗಿ ರೈಲಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮಾತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಂಗಾರುಪೇಟೆ ರೈಲ್ವೆ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ.