Chintamani : ಚಿಂತಾಮಣಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಶನಿವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ (World No Tobacco Day) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹರ್ಷಿತ “ಬೀಡಿ, ಸಿಗರೇಟ್, ಗುಟ್ಕಾ, ಪಾನ್-ಪರಾಗ್ ನಂತಹ ತಂಬಾಕು ಪದಾರ್ಥಗಳಿಂದ ಆಗುವ ಹಾನಿ, ತೊಂದರೆಯನ್ನು ಅರಿತುಕೊಳ್ಳಬೇಕು. ಉದಾಸೀನತೆ, ಬೇಜವಾಬ್ದಾರಿಯಿಂದ ಹಣವನ್ನು ವ್ಯಯ ಮಾಡಿಕೊಂಡು ಆರೋಗ್ಯ ಕೆಡಿಸಿಕೊಳ್ಳಬಾರದು. ಕುಟುಂಬದಲ್ಲಿ ಒಬ್ಬರಿಗೆ ಆರೋಗ್ಯ ಕೆಟ್ಟರೆ ಇಡೀ ಕುಟುಂಬವೇ ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ,ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವ ಮಂಜೇಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ, ಉಪಾಧ್ಯಕ್ಷ ಶಿವಾನಂದ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ, ನ್ಯಾಯಾಲಯದ ಶ್ರೀವಿದ್ಯಾ, ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.