Chikkaballapur : ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು (Dasara Sports meet) ಆಯೋಜಿಸಲಾಗಿತ್ತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ “ಜನರು ಅನಾದಿ ಕಾಲದಿಂದಲೂ ಕ್ರೀಡಾಕೂಟಗಳನ್ನು ಮನರಂಜನೆಗಾಗಿ ಹಾಗೂ ಮಾನಸಿಕ, ದೈಹಿಕ ಸಾಮರ್ಥ್ಯದ ಬೆಳವಣಿಗೆಗೆ ಪೂರಕವಾಗಿ ಆಯೋಜಿಸುತ್ತಿದ್ದರು. ಆ ದಿಕ್ಕಿನಲ್ಲಿ ದಸರಾ ಕ್ರೀಡಾಕೂಟ ಪ್ರಮುಖವಾದುದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಪ್ರತಿಭೆಯೂ ಅಡಗಿರುತ್ತದೆ. ಅದನ್ನು ಹೊರತರುವುದರ ಜೊತೆಗೆ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವುದು ಮುಖ್ಯ. ನೀವೆಲ್ಲ ಇಲ್ಲಿ ವಿಜೇತರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ದೇಶದ ಘನತೆ, ಗೌರವ ತರಬೇಕು” ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ನಟರಾಜ್, ಅರುಣ್, ಪ್ರಾಂಶುಪಾಲ ಬಾಲರಾಜು, ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಮಾರುತಿ, ರಮೇಶ್, ಸೀನಪ್ಪ, ಹನುಮಂತರಾಯಪ್ಪ, ಫಕ್ರುದ್ದೀನ್, ರಂಗರಾಮ್, ಮುರಳಿ ಮತ್ತಿತರರು ಪಾಲ್ಗೊಂಡಿದ್ದರು.