Bagepalli : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆಯ ಪ್ರೊ. ನಂಜುಂಡಸ್ವಾಮಿ ಬಣದ ನಾಯಕರು ಮತ್ತು ರೈತರು ತಾಲ್ಲೂಕು ಕಚೇರಿಯ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಿದರು.
ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಮುಖ್ಯ ರಸ್ತೆಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭನೆಯ ಪ್ರಮುಖ ಬೇಡಿಕೆಗಳು:
- ಕೃಷ್ಣಾ ನದಿಯ ನೀರು ಪಾಲು ಹರಿಸಲು
- ಕೃಷಿ ಆಧಾರಿತ ಕೈಗಾರಿಕೆಯನ್ನು ಸ್ಥಾಪಿಸಲು
- ರೈತರ ಸಾಲ ಮನ್ನಾ ಮಾಡುವುದು
- ಮೈಕ್ರೋಫೈನಾನ್ಸ್ ಹಾವಳಿ ತಪ್ಪಿಸುವುದು
- ಕೃಷಿ ಮಾರುಕಟ್ಟೆಯಲ್ಲಿ ರೈತರಿಂದ ಶೇಕಡಾ 10 ಕಮೀಷನ್ ಹತ್ತಿಕೊಡುವುದನ್ನು ನಿಲ್ಲಿಸುವುದು
- ಬೆಳೆಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಲು
- ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಲು
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಎನ್. ಗೋವಿಂದರೆಡ್ಡಿ ಮಾತನಾಡಿ, “ಕೆಸಿ ವ್ಯಾಲಿ ನೀರನ್ನು ಶುದ್ಧಿಕರಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಬೇಕು. ಕೃಷ್ಣಾ ನದಿಯ ನೀರನ್ನೂ ನಮ್ಮ ಜಿಲ್ಲೆಗಳಿಗೆ ಹರಿಸಬೇಕು. ಕೃಷಿ ಆಧಾರಿತ ಕೈಗಾರಿಕೆಯನ್ನು ಸ್ಥಾಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಪ್ರವರ್ತನೆ ತಡೆಯಬೇಕು. ರೈತರ ಹಕ್ಕುಗಳನ್ನು ರಕ್ಷಿಸಲು ಸರಳೀಕರಣದ ನೀತಿಯನ್ನು ಜಾರಿಗೆ ತರಬೇಕು. ಪ್ರತಿ ಲೀಟರ್ ಹಾಲಿಗೆ ₹ 5 ಪ್ರೋತ್ಸಾಹಧನ ನೀಡಬೇಕು, ಬಗರ್ ಹುಕಂ ಚೀಟಿಗಳನ್ನು ವಿತರಿಸಬೇಕು, ಸ್ವಾಮಿನಾಥನ್ ಆಯೋಗದ ವರದಿ ಅನಿವಾರ್ಯವಾಗಿ ಜಾರಿಗೆ ತರಬೇಕು. ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು
ತಹಶೀಲ್ದಾರ್ ಮನೀಷ ಎನ್. ಪತ್ರಿ ಪ್ರತಿಭಟನಾಕಾರರ ಮನವಿ ಪತ್ರವನ್ನು ಸ್ವೀಕರಿಸಿ, ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲೆಯ ಉಪಾಧ್ಯಕ್ಷ ಟಿ. ರವಿನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಜಿ. ಶ್ರೀಕಾಂತ್, ಸಂಘಟನಾಕಾರ್ಯದರ್ಶಿ ವೈ.ಆರ್. ನರಸಿಂಹರೆಡ್ಡಿ, ತಾಲ್ಲೂಕು ಅಧ್ಯಕ್ಷ ವೆಂಕಟಾಶಿವಾರೆಡ್ಡಿ, ಚೌಡರೆಡ್ಡಿ, ಲಕ್ಷ್ಮೀನರಸಪ್ಪ, ಕೃಷ್ಣಾರೆಡ್ಡಿ, ಆದಿನಾರಾಯಣಪ್ಪ, ಕೆ.ವಿ. ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.