Gauribidanur : ಆಂಧ್ರಪ್ರದೇಶದಿಂದ ಅಕ್ರಮವಾಗಿ ಸೇಂದಿ (Toddy) ಸಾಗಿಸುತ್ತಿದ್ದ ಜಾಲವನ್ನು ಭೇದಿಸಿರುವ ಗೌರಿಬಿದನೂರು ಅಬಕಾರಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲೀಟರ್ ಸೇಂದಿ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಹಾಲಗಾನಹಳ್ಳಿ ಮತ್ತು ದೊಡ್ಡ ಕುರುಗೋಡು ಗ್ರಾಮಗಳ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ.
ಬಂಧಿತರನ್ನು ಯಲಹಂಕದ ನಿವಾಸಿ ಮುನಿಯಪ್ಪ (57) ಮತ್ತು ಅರಸಲಬಂಡೆ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಗಡಿ ಭಾಗದಿಂದ ಕರ್ನಾಟಕದ ಗ್ರಾಮಗಳಿಗೆ ಕಾನೂನುಬಾಹಿರವಾಗಿ ಸೇಂದಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆಯ ತಂಡವು ದಾಳಿ ನಡೆಸಿದೆ. ಅಬಕಾರಿ ನಿರೀಕ್ಷಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ತಂಡದ ಕಾರ್ಯಾಚರಣೆ: ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಜೈರಾಮ್ ಎಸ್. ರಾಠೋಡ್, ಕುಮಾರ್ ಸಿ.ಎನ್ ಹಾಗೂ ಅಬಕಾರಿ ಕಾನ್‌ಸ್ಟೆಬಲ್ ಅಜಿತ್ ಕೆ. ಬೆಂಡವಾಡೆ ಮತ್ತು ರವಿಪ್ರಸಾದ್ ಪಾಲ್ಗೊಂಡಿದ್ದರು. ಅಕ್ರಮ ಮದ್ಯ ಮತ್ತು ಸೇಂದಿ ಮಾರಾಟ ತಡೆಗೆ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಗಡಿ ಭಾಗಗಳಲ್ಲಿ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
