Gauribidanur : ತಮಿಳು ನಟ ಕಮಲ್ ಹಾಸನ್ ನೀಡಿರುವ ಕನ್ನಡ ವಿರೋಧಿ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಹೇಳಿಕೆಯನ್ನು ತಕ್ಷಣ ವಾಪಸ್ ಪಡೆಯುವಂತೆ ಹಾಗೂ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ತಹಶೀಲ್ದಾರ್ ಮಹೇಶ್ ಎಸ್. ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸುರೇಶ್ ಬಾಬು, “ಕನ್ನಡ ಭಾಷೆಗೆ ವಿರೋಧವಾಗಿರುವಂತಹ ಹೇಳಿಕೆಯನ್ನು ನೀಡಿರುವ ನಟ ಕಮಲ್ ಹಾಸನ್ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ಕ್ಷಮೆ ಕೇಳುವವರೆಗೆ ಅವರ ಹೊಸ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು,” ಎಂದು ಹೇಳಿದರು.
ಇನ್ನೊಂದು ಕಡೆ, ವೇದಿಕೆಯ ತಾಲ್ಲೂಕು ಅಧ್ಯಕ್ಷ ಡಾ. ಅದಿಮೂರ್ತಿರೆಡ್ಡಿ ಮಾತನಾಡುತ್ತಾ, “ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ಇಂತಹ ಮಹಾನ್ ಭಾಷೆಗೆ ಅರಿವಿಲ್ಲದೆ, ಕನ್ನಡ ತಮಿಳಿನಿಂದ ಬಂದಿದೆಯೆಂಬ ಬಾಲಿಶ ಮತ್ತು ಅವೈಜ್ಞಾನಿಕ ಹೇಳಿಕೆ ಕೊಡಲಾಗಿರುವುದು ಅಕ್ಷಮ್ಯ,” ಎಂದು ಖಂಡಿಸಿದರು.
ಸರ್ಕಾರ ಈ ಕುರಿತಾಗಿ ತೀವ್ರ ನಿಲುವು ತೆಗೆದುಕೊಂಡು, ಇಂತಹ ಭಾಷಾ ಅವಮಾನಗಳನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕು ಎಂಬುದು ಮನವಿಯ ಮುಖ್ಯ ಒತ್ತಾಯವಾಗಿತ್ತು.
ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಸುಪ್ರಿಯಾ, ರಮಾಮಣಿ, ಸಂದೀಪ್, ವಿನಯ್ ಚಂದ್ರ, ಮಧು, ವೆಂಕಟರೆಡ್ಡಿ, ನರಸಿಂಹಮೂರ್ತಿ ಮತ್ತು ಬಾಬಣ್ಣ ಸೇರಿದಂತೆ ಹಲವಾರು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.