Gauribidanur : ಗೌರಿಬಿದನೂರು ನಗರದ ಹೊರವಲಯದ ಸಿರುಗುಪ್ಪ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ 18 ವರ್ಷಗಳಿಂದಲೂ ಕಾರ್ಮಿಕರಿಗೆ ನೀಡಬೇಕಾದ ವೇತನ ಮತ್ತು ರೈತರ ಷೇರು ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಸಿರುಗುಪ್ಪ ಸಕ್ಕರೆ ಕಾರ್ಖಾನೆಯನ್ನು 2001 ರಲ್ಲಿ ಮುಚ್ಚಲಾಗಿತ್ತು, ಎರಡು ದಶಕಗಳಿಂದಲೂ ಸ್ಥಗಿತಗೊಂಡಿದ್ದ ಕಾರ್ಖಾನೆಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಕಾರ್ಖಾನೆಯ ಯಂತ್ರಗಳು ಮತ್ತು ಸ್ಕ್ರಾಪ್ ಮಾರಾಟ ಮಾರಾಟ ಮಾಡಲು ಮುಂದಾಗಿದ್ದಾರೆ, ಇದನ್ನು ಮಾರಲು ಬಿಡುವುದಿಲ್ಲ. ಈ ಬಗ್ಗೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗುವುದು. ನ್ಯಾಯಾಲಯಕ್ಕೆ ಮತ್ತೊಮ್ಮೆ ಮೊರೆ ಹೋಗುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
1988ರಲ್ಲಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆ ಆರಂಭ ವಾಯಿತು. ಕಾಲಕಳೆದಂತೆ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಕ್ಷೀಣಿಸಿದ ಪರಿಣಾಮವಾಗಿ ನೀರಿನ ಅಭಾವದಿಂದ ಕಬ್ಬು ಬೆಳೆಗಾರರ ಸಂಖ್ಯೆ ಕಡಿಮೆ ಆಯಿತು. 2001 ರಲ್ಲಿ ಕಾರ್ಖಾನೆ ಮುಚ್ಚಕಲಾಗಿ 567 ಕಾರ್ಮಿಕ ಕುಟುಂಬ ಬೀದಿಗೆ ಬಿದ್ದಿದ್ದರು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಹಾಗೂ ಷೇರುದಾರರು ಸಂಕಷ್ಟಕ್ಕೆ ಗುರಿಯಾದರು. ಈ ಬಗ್ಗೆ ಕಾರ್ಮಿಕರು ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಆಯುಕ್ತರು ಪರಿಶೀಲನೆ ನಡೆಸಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯಂತೆ ಕಾರ್ಖಾನೆ ಮಾರಾಟ ಮಾಡಿ, ಬಾಕಿ ವೇತನ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಆದೇಶಿಸಿದ್ದರು. ಅದರಂತೆ ಕಂದಾಯ ನಿಯಮಗಳ ಅಡಿಯಲ್ಲಿ ಕಾರ್ಖಾನೆ ಹರಾಜು ಮಾಡಿ, ಬಾಕಿ ಇರುವ ಕಬ್ಬಿನ ಹಣ ಪಾವತಿಸಿದ್ದಾರೆ. ಆದರೆ ಕೋರ್ಟ್ ಸೂಚನೆಯಂತೆ 567 ಕಾರ್ಮಿಕರಿಗೆ 2001 ರಿಂದ 2009 ರವರೆಗೆ ಪಾವತಿಸಬೇಕಾದ ಶೇ 12 ರಷ್ಟು ಬಡ್ಡಿಸಹಿತ ₹ 18 ಕೋಟಿ ವೇತನ ಹಾಗೂ ರೈತರ ಷೇರು ಹಣವನ್ನು ಪಾವತಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾರ್ಮಿಕ ಸಂಘದ ಪ್ರದಾನ ಕಾರ್ಯದರ್ಶಿ ಅಶ್ವತ್ಥಪ್ಪ, ಕಾರ್ಯದರ್ಶಿಗಳಾದ ಎ ಡಿ ರಾಮಚಂದ್ರ ರೆಡ್ಡಿ, ರವೀಂದ್ರ, ಖಜಾಂಚಿ ಎನ್ ಗಂಗಾಧರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.