Chintamani : ಚಿಂತಾಮಣಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೊರೊನ ಮೂರನೆಯ ಅಲೆ ತಡೆಗಟ್ಟಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅರೋಗ್ಯ ಇಲಾಖೆಯ ಭರವಸೆ ಹುಟ್ಟುವಂತೆ ಕೆಲಸ ಮಾಡಬೇಕು. ಮಕ್ಕಳ ಆಸ್ಪತ್ರೆಗೆ ಬರುವವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಅವರು ತಿಳಿಸಿದರು.
ನಗರದಲ್ಲಿ ಸುಸಜ್ಜಿತ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಿದ್ದು, ಸರ್ಕಾರದಿಂದ ಅನುದಾನ, ನುರಿತ ವೈವೈದ್ಯರ ಸೌಲಭ್ಯವಿದ್ದರೂ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೆಲವು ಲೋಪದೋಷಗಳ ದೂರು ಬಂದಿದ್ದು, ಆಸ್ಪತ್ರೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಪದೋಷಗಳನ್ನೂ ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೋವಿಡ್-19 ವ್ಯಾಕ್ಸಿನ್ ನೀಡುತ್ತಿರುವುದರಲ್ಲಿ ತಾಲ್ಲೂಕು ಉತ್ತಮ ಪ್ರಗತಿ ಸಾಧಿಸಲಾಗಿದೆ. ಇನ್ನೂ ವ್ಯಾಕ್ಸಿನ್ ಪಡೆಯದಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ, ತಾಲ್ಲೂಕಿನ ಹೊರಗಡೆ ಕೆಲಸ ಮಾಡುತ್ತಿರುವವರಿಗೆ ಒಂದು ಭಾನುವಾರ ವಿಶೇಷ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಹನುಮಂತರಾಯಪ್ಪ, ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾತಿ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್, ಆಪ್ತ ಸಹಾಯಕ ಮೋಹನ್ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.