Gauribidanur : ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಶುಕ್ರವಾರ ಬಿಜೆಪಿಯ ರೈತ ಮೋರ್ಚಾದಿಂದ ಆಯೋಜಿಸಿದ್ದ ‘ಕಿಸಾನ್ ಜವಾನ್ ಸಮ್ಮಾನ್ ದಿನ’ ಉದ್ಘಾಟಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ ಮಾತನಾಡಿದರು.
ರಾಷ್ಟ್ರದಲ್ಲಿ ವಿವಿಧ ಯೋಜನೆಗಳು ಮತ್ತು ಜನಪರವಾದ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸುತ್ತಾ ಬಂದಿದ್ದಾರೆ. ಕೇವಲ ರಾಷ್ಟ್ರದ ಜನತೆಯಲ್ಲದೆ ಇಡೀ ವಿಶ್ವದ ಜನತೆ ಅವರ ಆಡಳಿತ ವೈಖರಿಯನ್ನು ಮೆಚ್ಚಿದ್ದಾರೆ. ದೇಶವು 7 ದಶಕಗಳ ನಂತರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರೆ ಅದಕ್ಕೆ ನರೇಂದ್ರ ಮೋದಿ ನೇತೃತ್ವದ ಪಾರದರ್ಶಕ ಆಡಳಿತವೇ ಕಾರಣ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ನಂಜೇಶ್ ರೆಡ್ಡಿ ಮಾತನಾಡಿ, ದೇಶದಲ್ಲಿ ಹದಗೆಟ್ಟಿದ್ದ ಹಣದುಬ್ಬರವನ್ನು ಸುಧಾರಣೆ ಮಾಡಿ ನೀಡಿದ ಭರವಸೆಗಳಂತೆ ಎಲ್ಲವನ್ನೂ ನರೇಂದ್ರ ಮೋದಿಯವರು ಈಡೇರಿಸಿಕೊಂಡು ಬಂದಿದ್ದಾರೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಜಿ.ಆರ್.ರಾಜಶೇಖರ್ ಮಾತನಾಡಿ, ದೇಶದ ಪ್ರಗತಿಗೆ ಪ್ರತೀ ಗ್ರಾಮದಲ್ಲಿನ ರೈತರೇ ಬೆನ್ನೆಲುಬು ಎಂಬುದನ್ನು ಅರಿತು ರೈತರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಮುಖಂಡರಾದ ಬಾಲಕೃಷ್ಣ, ಜೆ.ವಿ.ಹನುಮೇಗೌಡ, ಸುದರ್ಶನರೆಡ್ಡಿ, ಎಸ್.ಪ್ರದೀಪ್, ಪವಿತ್ರ ಪ್ರತಾಪ್, ಕೃಷ್ಣಾರೆಡ್ಡಿ, ಆರ್.ವೆಂಕಟೇಶ್, ಪಿ.ಎನ್.ಜಗನ್ನಾಥ್, ರಮೇಶ್ ಬಾಯಿರಿ, ಮಂಜುನಾಥ್, ರಾಮಣ್ಣ, ಪಿ.ವಿ.ವಿರೂಪಾಕ್ಷಗೌಡ, ನರಸಿಂಹಮೂರ್ತಿ, ಕಾಂತರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.