Sidlaghatta : ಸಹಕಾರ ಕ್ಷೇತ್ರದಲ್ಲಿ ಇದ್ದಂತಹ ಹಲವು ನ್ಯೂನತೆಗಳನ್ನು ಹಾಗೂ ಈಗಿನ ಕಾಲಕ್ಕೆ ಸರಿ ಹೊಂದದಂತಹ ಕೆಲವೊಂದು ಅಂಶಗಳಿಗೆ ತಿದ್ದುಪಡಿ ತಂದಿದ್ದು ಎರಡೂ ಸದನಗಳಲ್ಲಿ ಅಂಗೀಕೃತವಾಗಿದೆ. ರಾಜ್ಯಪಾಲರ ಅನುಮೋದನೆ ಬಾಕಿ ಇದೆ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಒಕ್ಕೂಟ, ಕೋಚಿಮುಲ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಗರದಲ್ಲಿನ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತಿ ಸಾಧಿಸಿ ರೈತರು, ಕೃಷಿಕರು, ಹೈನುಗಾರರು ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಹಕಾರಿ ಕಾಯಿದೆಗಳಿಗೆ ತಿದ್ದುಪಡಿ ತರಲಾಗುತ್ತಿದ್ದು ರಾಜ್ಯಪಾಲರ ಅನುಮೋದನೆ ಸಿಗುತ್ತಿದ್ದಂತೆ ಜಾರಿ ಆಗಲಿವೆ.
ಡೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಸಹಕಾರ ಕ್ಷೇತ್ರದಲ್ಲಿನ ಜನಪ್ರತಿನಿಧಿಗಳು ಈ ನೂತನ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಪರಿಣಾಮಕಾರಿ ಅನುಷ್ಠಾನ ಮಾಡುವ ಕೆಲಸ ಆಗಬೇಕೆಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಹಮ್ಮಿಕೊಂಡಿದ್ದು ಈ ಶಿಬಿರದ ಉಪಯೋಗ ಆಗಲಿ, ರೈತರು, ಹೈನುಗಾರರಿಗೆ ಇನ್ನಷ್ಟು ಸವಲತ್ತುಗಳು ಸಿಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕಾಳನಾಯಕನಹಳ್ಳಿ ಕೆ.ಎಂ.ಭೀಮೇಶ್ ಮಾತನಾಡಿ, ಹಲವಾರು ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅನೇಕ ರೀತಿಯಲ್ಲಿ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಯಾರೋ ಒಂದಿಬ್ಬರು ಮಾಡುವ ಇಂತಹ ಕೃತ್ಯಗಳಿಗೆ ಎಲ್ಲ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುವಂತಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು. ಸಹಕಾರಿ ಶಿಕ್ಷಣ ನಿಧಿಯ ಚೆಕ್ ಗಳನ್ನು ಹಂಡಿಗನಾಳ ಮಹಿಳಾ ಡೇರಿ ಸೇರಿದಂತೆ ಕೆಲ ಡೇರಿಗಳಿಂದ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನೀಡಲಾಯಿತು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್, ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎನ್.ನಾಗರಾಜ್, ವಿಸ್ತರಣಾಕಾರಿ ಎಚ್.ಎಸ್.ಉಮೇಶ್‌ರೆಡ್ಡಿ, ಎನ್.ಜಿ.ಜಯಚಂದ್ರ, ವಿ.ಶ್ರೀನಿವಾಸ್, ಶಂಕರ್ ಕುಮಾರ್, ಮಂಜುನಾಥ್, ಶಶಿಕುಮಾರ್ ಹಾಜರಿದ್ದರು.