Sidlaghatta : ಶಿಡ್ಲಘಟ್ಟ ನಗರದ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಸಕಾಲ ಯೋಜನೆಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಜಾಗೃತಿ ಜಾಥಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ರಾಜ್ಯ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಯೋಜನೆ ಜಾರಿಯಾಗಿ ಯಶಸ್ವಿ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ “ಸಕಾಲ ಅರಿವು ಜಾಥಾ” ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಸುಮಿತ್ರಾ ರಮೇಶ್ ತಿಳಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಇಂದು…ನಾಳೆ…ಇನ್ನಿಲ್ಲ…ಹೇಳಿದ ದಿನ ತಪ್ಪೋಲ್ಲ! ಎಂಬ ಧ್ಯೇಯ ವಾಕ್ಯದ ಜನ ಪ್ರಿಯ ಸಕಾಲ ಯೋಜನೆಯ ಸೌಲಭ್ಯಗಳನ್ನು ಸಾರ್ವಜನಿಕರು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಇಲಾಖೆಯಲ್ಲಿ ಸಕಾಲ ಸೇವೆಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಜಿ.ಎಸ್.ಸಿ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಕಾಲ ರಾಜ್ಯ ಸರ್ಕಾರದ ಅತ್ಯಂತ ಯಶಸ್ವಿ ಹಾಗೂ ಜನಮೆಚ್ಚುಗೆ ಪಡೆದ ಯೋಜನೆ. ಈ ಯೋಜನೆಯಿಂದ ಸರ್ಕಾರಿ ಸೇವೆ ಜನ ಸಾಮಾನ್ಯರಿಗೆ ನಿಗಧಿತ ಅವಧಿಯಲ್ಲಿ ದೊರೆಯುತ್ತಿದೆ. ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸಿ, ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಲು ಸರ್ಕಾರಿ ಅಧಿಕಾರಿಗಳಾದ ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.
ಆರೋಗ್ಯ ಇಲಾಖೆಯ ಹಾಗೂ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಕಾಲ ಯೋಜನೆಯ ವಿವಿಧ ಸೌಲಭ್ಯಗಳ ಕುರಿತು ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.