Sidlaghatta : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿಪತ್ರವನ್ನು ಶನಿವಾರ ಸಲ್ಲಿಸಲಾಯಿತು.
ತಾಲ್ಲೂಕು ನೌಕರರ ಭವನದಿಂದ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಹೊರಟು ಪ್ರವಾಸಿಮಂದಿರದವರೆಗೆ ಸಾಗಿದ ಅಪಾರ ಸಂಖ್ಯೆಯ ಸರ್ಕಾರಿ ನೌಕರರು ಮಾನವ ಸರಪಳಿ ರಚಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟ ನಂತರ ಮನವಿಪತ್ರ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದಾಗ್ಯೂ ಸಾರ್ವಜನಿಕರಿಗೆ, ಸರ್ಕಾರದ ಯೋಜನೆಗಳ ಅನುಷ್ಟಾನಕ್ಕೆ ತೊಂದರೆಯಾಗದಂತೆ ಇರುವ ನೌಕರರೇ ಕಾರ್ಯಹೊಂದಾಣಿಕೆ ಮಾಡಿಕೊಂಡು ಶ್ರಮಿಸಿ ಕಷ್ಟಪಡುತ್ತಿದ್ದೇವೆ. ರಾಜ್ಯದ ಸರ್ಕಾರಿ ನೌಕರರ ಕರ್ತವ್ಯನಿಷ್ಟೆ ದೇಶದಲ್ಲಿಯೇ ಮಾದರಿಯಾಗಿದೆ. ಆದರೆ ಇಲ್ಲಿಯವರೆಗೆ 7 ನೇ ವೇತನ ಆಯೋಗದ ಸವಲತ್ತುಗಳು ಅನುಷ್ಟಾನಗೊಳಿಸದೇ ವೃಥಾ ವಿಳಂಬವಾಗುತ್ತಿದೆ. ಬಹುಬೇಗ 7 ನೇ ವೇತನ ಆಯೋಗದ ಸೌಲಭ್ಯಗಳು ಅನುಷ್ಟಾನಗೊಳ್ಳಬೇಕಿದೆ ಎಂದರು.
ನಿವೃತ್ತಿಯ ಸಂಧ್ಯಾಕಾಲದಲ್ಲಿ ಸರ್ಕಾರಿ ನೌಕರರಿಗೆ ಸಿಗಬೇಕಾಗಿದ್ದ ಹಳೆಯ ನಿವೃತ್ತಿವೇತನ ವ್ಯವಸ್ಥೆಯು ಮರುಸ್ಥಾಪನೆಯಾಗಬೇಕು. ಎನ್.ಪಿ.ಎಸ್ ನಂತಹ ಮಾರಕ ಯೋಜನೆಯನ್ನು ನಿಲ್ಲಿಸಬೇಕು. ತಕ್ಷಣದಿಂದಲೇ ಓ.ಪಿ.ಎಸ್ ಸೌಲಭ್ಯವನ್ನು ಸರ್ಕಾರವು ಜಾರಿಗೊಳಿಸಬೇಕು. ಹಿಂದಿನ ಸರ್ಕಾರವು ಜಾರಿಗೊಳಿಸಿದ್ದ . ಆರೋಗ್ಯಯೋಜನೆಯನ್ನು ಸರ್ಕಾರಿನೌಕರರ, ಕುಟುಂಬದವರ ಅನುಕೂಲಕ್ಕೆ ಶೀಘ್ರವೇ ಜಾರಿಗೊಳಿಸಬೇಕು. ಈ ಕುರಿತು ಸರ್ಕಾರದ ಗಮನಸೆಳೆಯಲು ಇಡೀ ರಾಜ್ಯದಾದ್ಯಂತ ಎಲ್ಲಾ ಶಾಸಕರಿಗೂ ಮನವಿಸಲ್ಲಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಗುರುರಾಜ್, ನಿವೃತ್ತ ನೌಕರರ ಸಂಘದ ಜಯರಾಂ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್.ಎಂ.ಅಕ್ಕಲರೆಡ್ಡಿ, ಗೌರವಾಧ್ಯಕ್ಷ ಸಿ.ಎಂ.ಮುನಿರಾಜು, ಮಧು, ದೇವರಾಜು, ನರಸಿಂಹಪ್ಪ, ಕೆಂಪೇಗೌಡ, ವೆಂಕಟಶಿವಾರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿ ಸೀನಪ್ಪ, ಖಜಾಂಚಿ ಸುಂದರಾಚಾರಿ, ತಾಲ್ಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಕಂದಾಯ, ಆರೋಗ್ಯ, ಶಿಕ್ಷಣ, ಕೃಷಿ ಮತ್ತಿತರ ಇಲಾಖೆಗಳ ಅಪಾರಸಂಖ್ಯೆ ನೌಕರರು ಹಾಜರಿದ್ದರು.