Gudibande : ತಾಲ್ಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಅಪಾಯಕಾರಿಯಾದ ಪರಿಸ್ಥಿತಿಯೊಂದರಲ್ಲಿ ನಾಲ್ಕು ವರ್ಷದ ಮಗು ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ದುರ್ಘಟನೆ ನಡೆದಿದೆ. ಹಳೇಗುಡಿಬಂಡೆ ಗ್ರಾಮದ ನರಸಿಂಹಮೂರ್ತಿ ಅವರ ಪುತ್ರ ಅರ್ಷಿತ್ ರೆಡ್ಡಿ (4) ಮೃತದೇಹವಾಗಿ ಪತ್ತೆಯಾದ ಮಕ್ಕಳು.
ಘಟನೆಯ ವಿವರಗಳ ಪ್ರಕಾರ, ಜೋಳ ಬಿತ್ತನೆಗೆ ಸಂಬಂಧಿಸಿದಂತೆ ನರಸಿಂಹಮೂರ್ತಿ ಅವರು ತಮ್ಮ ಜಮೀನಿಗೆ ಮಗನನ್ನು ಜೊತೆ ಕರೆದುಕೊಂಡು ಹೋಗಿದ್ದರು. ಮಗುವು ಆಟವಾಡುತ್ತಾ ಅಲ್ಲಿಂದ ಅಲ್ಪ ದೂರದಲ್ಲಿದ್ದ ಖಾಲಿ ನಿವೇಶನದ ನೀರಿನ ಗುಂಡಿಗೆ ಜಾರಿ ಬಿದ್ದು ಮುಳುಗಿದೆ. ಜೋಳ ಬಿತ್ತನೆಯಲ್ಲಿ ನಿರತರಾಗಿದ್ದ ತಂದೆಗೆ ಈ ಘಟನೆ ಗೊತ್ತಾಗದೇ ಉಳಿದಿದ್ದು, ಕೆಲಸ ಮುಗಿದ ಬಳಿಕ ಮಗುವಿಗಾಗಿ ಹುಡುಕಾಟ ಆರಂಭಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಮತ್ತೆ ಹುಡುಕಾಟ ವೇಳೆ ನೀರಿನ ಗುಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಮಗುವಿನ ತಾಯಿ ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.