Sidlaghatta : ಶಾಲಾ ತರಗತಿ ಭೋಧನೆಯ ವೇಳೆ ಕೌಶಲಗಳನು ಬಳಸಿ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣ ನೀಡಬಲ್ಲ ಶಕ್ತಿಯು ಶಿಕ್ಷಕರಿಗೆ ಇರುವುದರಿಂದ ಭವಿಷ್ಯ ಭಾರತದ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ಬೀಳ್ಕೊಡುಗೆ, ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತರಗತಿಯಲ್ಲಿ ಶಿಕ್ಷಕರೊಬ್ಬರು ತೊಡಗಿಸಿಕೊಳ್ಳಬಹುದಾದ ವಿಧಾನ, ಬೋಧನಾ ಕೌಶಲ, ಸಮಯಪ್ರಜ್ಞೆ, ವೃತ್ತಿಯಲ್ಲಿನ ಬದ್ಧತೆಯಂತಹ ಗುಣಗಳು ಶಿಕ್ಷಕರನ್ನು ಮಹೋನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲವು. ಶಿಕ್ಷಕರು ನಿಷ್ಪೃಹತೆಯಿಂದ ಕಾರ್ಯತತ್ಪರರಾಗಬೇಕು ಎಂದರು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಶಿಕ್ಷಕ ಹುದ್ದೆಯು ಬಹು ಪವಿತ್ರವಾದುದಾಗಿದ್ದು ದೇಶದ ನಿರ್ಮಾಣ ಕಾರ್ಯದ ಶಿಲ್ಪಿಯಾಗಿರುವುದರಿಂದ ಪ್ರತಿ ಶಿಕ್ಷಕನಲ್ಲಿ ಕುಶಲಕಾರ, ಆಡಳಿತಗಾರ, ಅಕ್ಷರದಾಸೋಹ, ನಿಷ್ಕಳಂಕ, ಮಾತೃತ್ವದಂತಹ ಎಲ್ಲಾ ಗುಣಗಳಿರುತ್ತವೆ. ತಮ್ಮಲ್ಲಿರುವ ಕೌಶಲವನ್ನು ಮತ್ತಷ್ಟು ಸಿಕ್ಕ ಅವಕಾಶಗಳಲ್ಲಿ ತೋರ್ಪಡಿಸಿಕೊಳ್ಳುವಲ್ಲಿ ಶಿಕ್ಷಕರು ಹಿಂದೆ ಬೀಳಬಾರದು ಎಂದರು.
ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಇತರೆಡೆಗೆ ವರ್ಗಾವಣೆಗೊಂಡ ಎಂ.ಎಸ್.ವಿದ್ಯಾ, ಟಿ.ಇ,ಶ್ರೀನಿವಾಸ್, ಡಿ.ನಾರಾಯಣಸ್ವಾಮಿ, ಎಂ.ಮೊಹಮದ್ ಇಮ್ರಾನ್, ಜ್ಯೋತಿ ಎಸ್.ಗದಗ್, ಎಸ್.ಶಿವಲೀಲಾ, ಸಿ.ಎಸ್.ಜಯಲಕ್ಷ್ಮಿ, ಎ.ಶ್ರೀನಿವಾಸ್, ಎಂ.ಆರ್.ನಳಿನಾ, ಬಿ.ಎಂ.ರಾಧಾಕೃಷ್ಣ, ಪಿ.ಸವಿತಾ, ಮುರಳಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ಖಜಾಂಚಿ ಗೋಪಾಲಕೃಷ್ಣ, ತಾಲ್ಲೂಕು ಸಂಘದ ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಖಜಾಂಚಿ ಹೇಮಾವತಿ, ಸಹಕಾರ್ಯದರ್ಶಿ ಎಂ.ಶಿವಕುಮಾರ್, ಮುಖ್ಯಶಿಕ್ಷಕ ಪ್ರಸನ್ನಕುಮಾರ್, ಇಷ್ರತ್, ಮೊಮಿನಾಬೇಗಂ, ಶಿಕ್ಷಣ ಸಂಯೋಜಕ ವೈ.ಯು.ಮಂಜುನಾಥ್, ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.