Sidlaghatta : ಲಸಿಕೆಯಿಂದ ವಂಚಿತವಾದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಬೇಕು. ಲಸಿಕೆಯಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಾಲ್ಲೂಕಿನಲ್ಲಿ ಮಿಷನ್ ಇಂದ್ರಧನುಷ್ 5.0 ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಮುಂಭಾಗ ಗುರುವಾರ ಮಿಷನ್ ಇಂದ್ರಧನುಷ್ 5.0 ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದ್ದರು.
ಸಾಮಾನ್ಯವಾಗಿ ನಗರ, ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಿಸುತ್ತಾರೆ. ಆದರೆ ಶೇ 10 ರಷ್ಟು ಮಂದಿ ಹಲವು ಕಾರಣಗಳಿಂದ ಲಸಿಕೆಯಿಂದ ವಂಚಿತರಾಗಿರುತ್ತಾರೆ. ಹಾಗಾಗಿ ಕಳೆದ 15 ದಿನಗಳಿಂದ ಸಮೀಕ್ಷೆ ನಡೆಸುವ ಮೂಲಕ ಇವರನ್ನು ಗುರುತಿಸಲಾಗಿದ್ದು 0-2 ವರ್ಷದ 224 ಮಕ್ಕಳು, 2-5 ವರ್ಷದ 1 ಮಗು ಸೇರಿದಂತೆ 29 ಗರ್ಭಿಣಿಯರನ್ನು ಗುರುತಿಸಲಾಗಿದ್ದು ಇವರೆಲ್ಲರಿಗೂ ಆಗಸ್ಟ್ 7 ರಿಂದ 12 ರವರೆಗೂ ಲಸಿಕೆ ಹಾಕುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಈಗಾಗಲೆ ತಾಲ್ಲೂಕಿನ 28 ಕಡೆ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್, ಕಿರಿಯ ಸಹಾಯಕಿ ಮುನಿರತ್ನಮ್ಮ, ವಿಜಯಮ್ಮ, ಸಿಬ್ಬಂದಿ ನಂದಿನಿ, ಗೀತಾ, ಅಫ್ರೋಜ್, ಕೀರ್ತಿ ಹಾಜರಿದ್ದರು.