Chikkaballapur : ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಸೋಮವಾರ, ಜಿಲ್ಲೆಯಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ (Jakanachari Remembrance Day) ಕಾರ್ಯಕ್ರಮ ಆಚರಿಸಲಾಯಿತ್ತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಾಧಿಸಿದ ಶಿಲ್ಪಕಲಾ ಕ್ಷೇತ್ರದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು, “ಭಾರತೀಯ ಸಂಪ್ರದಾಯದಂತೆ ದೇಶಾದ್ಯಾಂತ ನಿರ್ಮಿಸಿರುವ ದೇವಾಲಯಗಳು ಜಕಣಾಚಾರಿ ಅವರ ಕಲೆಯ ಅರ್ಥವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡುತ್ತಿವೆ. ಈಗಿನ ಕಾಲದಲ್ಲಿ ಕೌಶಲವು ತುಂಬಾ ಮುಖ್ಯವಾಗಿದ್ದು ಕೌಶಲ ಹೊಂದಿರುವವರಿಗೆ ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆ ನೀಡಲಾಗುತ್ತದೆ. ‘ಪಿಎಂ ಯೋಜನೆ’ ಮೂಲಕ, ವಿವಿಧ ಕೌಶಲ ಆಧಾರಿತ ವೃತ್ತಿಯಲ್ಲಿ ಪಟ್ಟು ಹಿಡಿದಿರುವವರು ವಿವಿಧ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆ ವಿಶ್ವಕರ್ಮ ಸಮುದಾಯಕ್ಕೆ ತುಂಬಾ ಉಪಕಾರಿ.” ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ಹಾಗೂ ದೇವಾಲಯ ಕಟ್ಟಡ ಕಾರ್ಮಿಕ ಶಿಲ್ಪಕಲಾ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.