Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ (KRS Party) ಸೋಮವಾರ ಬೈಕ್ ರ‍್ಯಾಲಿ (Bike Rally) ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ KRS ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ “ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಬೈಕ್ ರ‍್ಯಾಲಿ ಮೂಲಕ ಭ್ರಷ್ಟರನ್ನು ರಾಜಕೀಯವಾಗಿ ತಿರಸ್ಕರಿಸಿ, ಪ್ರಾಮಾಣಿಕರಿಗೆ ಮನ್ನಣೆ ನೀಡಿ ಎಂದು ಜಾಗೃತಿ ಮೂಡಿಸುತ್ತಿದ್ದು ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಅವರ ಸೋಲಿಗೆ ನಮ್ಮ ಪಕ್ಷ ಕಾರಣ. ನಾವು ಅವರ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಅಗತ್ಯವಿರುವ ತರಕಾರಿ, ಸೊಪ್ಪು, ಹಾಲನ್ನು ಗರಿಷ್ಠ ಪ್ರಮಾಣದಲ್ಲಿ ಪೂರೈಸಲಾಗುತ್ತಿದ್ದು ಬೆಂಗಳೂರಿನ ಕೊಳಚೆ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೆ ಇಲ್ಲಿನ ಕೆರೆಗಳನ್ನು ತುಂಬಿಸಲಾಗುತ್ತಿರುವುದರಿಂದ ಭವಿಷ್ಯದಲ್ಲಿ ತರಕಾರಿ, ಹಣ್ಣು, ಧಾನ್ಯಗಳನ್ನು ದನಗಳು ಸಹ ತಿನ್ನುವುದಿಲ್ಲ. ಚಿಕ್ಕಬಳ್ಳಾಪುರದಿಂದ ಆಯ್ಕೆಯಾದ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಒಂದು ದಿನವೂ ಪ್ರಶ್ನೆ ಕೇಳಿಲ್ಲ. ಮಾತನಾಡಿಲ್ಲ. ಅವರ ಮಗ ಕಾಂಗ್ರೆಸ್ ಶಾಸಕರು. ಹೀಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲ ಪಕ್ಷಗಳು ಒಂದೇ ಮನಸ್ಥಿತಿಯವು. ಪ್ರದೀಪ್ ಈಶ್ವರ್ ಕಾಮಿಡಿ ಶಾಸಕ, ಅವರು ಮಾತುಗಾರನಷ್ಟೇ” ಎಂದು ಟೀಕಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಮುಖಂಡ ರಘು ಜಾಣಗೆರೆ, ದೀಪಕ್, ಲಿಂಗೇಗೌಡ, ಶ್ರೀನಿವಾಸ್ ಹಾಗೂ ಕಾರ್ಯಕರ್ತರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.