Sidlaghatta: ಕೋವಿಡ್-19 ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಕನಿಷ್ಟ ಮಾಸ್ಕ್ ಧರಿಸದೆ, ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡದೇ ಪಾಠಪ್ರವಚನಗಳನ್ನು ಭೋದನೆ ಮಾಡುತ್ತಿದ್ದ ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯನ್ನು ಲೋಕಾಯುಕ್ತ ಎಸ್‍ಪಿ ಪೂವಯ್ಯ ಅವರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರರಿಂದ ಎಂಟನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಶಾಲೆಯ ಮುಖ್ಯಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಒದಗಿಸಬೇಕೆಂದು ನಿರ್ದೇಶನ ನೀಡಿದರೂ ಸಹ, ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠಪ್ರವಚನ ಭೋದನೆ ಮಾಡುತ್ತಿದ್ದ ಶಿಕ್ಷಕಿ ಮತ್ತು ಪಾಠಪ್ರವಚನಗಳನ್ನು ಆಲಿಸುತ್ತಿದ್ದ ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ ಇರುವುದನ್ನು ನೋಡಿದ ಲೋಕಾಯುಕ್ತ ಎಸ್‍ಪಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಲು ತಮಗೆ ಕನಿಷ್ಟ ಜ್ಞಾನ ಇಲ್ಲವೆಂದು ಕಿಡಿ ಕಾರಿದರು.
ಲೋಕಾಯುಕ್ತ ಎಸ್‍ಪಿ ತರಾಟೆಗೆ ತೆಗೆದುಕೊಂಡ ತಕ್ಷಣ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಕೂಡಲೇ ಮಾಸ್ಕ್ ಧರಿಸಿದರು. ವಿದ್ಯಾರ್ಥಿಗಳಿಗೂ ಸಹ ಮಾಸ್ಕ್ ಧರಿಸಿ ಶಾಲೆಗೆ ಹಾಜರಾಗಲು ನಿರ್ದೇಶನ ನೀಡಬೇಕೆಂದು ಲೋಕಾಯುಕ್ತ ಎಸ್‍ಪಿ ತಾಕೀತು ಮಾಡಿದರಲ್ಲದೆ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಾಠಪ್ರವಚನ ಮಾಡುತ್ತಿದ್ದ ಶಾಲೆಯ ಶಿಕ್ಷಕಿಯ ವಿರುದ್ದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿದ್ದರೂ ಸಹ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ, ಶಿಡ್ಲಘಟ್ಟ ನಗರದ ಕೆಲವೊಂದು ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಎಸ್‍ಪಿ ಅವರಿಗೆ ಕೋವಿಡ್ ನಿಯಮ ಪಾಲಿಸದಿರುವ ಮಾಡಿರುವ ಅಂಶವನ್ನು ಸಾಕ್ಷಾತ್ ದರ್ಶನ ಮಾಡುವಂತಾಯಿತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಬ್ ಇನ್‍ಸ್ಪೆಕ್ಟರ್ ಸಲೀಂ ನದಾಫ್, ಮುಖ್ಯ ಶಿಕ್ಷಕ ಎನ್ ವೆಂಕಟೇಶಪ್ಪ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.