Chikkaballapur : ಶುಕ್ರವಾರ ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಸಿಯೂಟ ಸಿಬ್ಬಂದಿಯ ಸಂಭಾವನೆ, ಆಹಾರಧಾನ್ಯ, ಅಡುಗೆ ವೆಚ್ಚದ ಅನುದಾನವನ್ನು ಅಕ್ಷಯಪಾತ್ರೆಗೆ ವರ್ಗಾಯಿಸುವುದನ್ನು ಖಂಡಿಸಿ, ಕೂಡಲೇ ಈ ಸುತ್ತೋಲೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಿಸಿಯೂಟ ಸಿಬ್ಬಂದಿ ಪ್ರತಿಭಟಿಸಿದರು. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿದ ಪ್ರತಿಭಟನಕಾರರು ಸರ್ಕಾರ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸರ್ಕಾರ ಕೋಟ್ಯಂತರ ಹಣ ವೆಚ್ಚಿಸಿ ಅಡುಗೆ ಕೋಣೆ, ಪಾತ್ರೆ, ಪರಿಕರ, ನೀರಿನ ವ್ಯವಸ್ಥೆ ರಂತಹ ಅನೇಕ ವ್ಯವಸ್ಥೆ ಮಾಡಿ ಖಾಸಗಿಯವರಿಗೆ ಬಿಸಿಯೂಟ ಯೋಜನೆ ನೀಡುವುದು ಅಕ್ಷಮ್ಯ . ಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಕದಿರೇನಹಳ್ಳಿ, ಯರ್ರಮಾರೇನಹಳ್ಳಿ, ರಾಮಪಟ್ಟಣ, ಕಠಾರಿಕದಿರೇನಹಳ್ಳಿ, ಪೈಯ್ಯೂರು, ದರಬೂರು ಮತ್ತು ಮಂಡಿಕಲ್ಲು ಸರ್ಕಾರಿ ಶಾಲೆಗಳಲ್ಲಿನ ಸುಮಾರು 772 ಮಕ್ಕಳಿಗೆ ಅಕ್ಷಯಪಾತ್ರೆಯ ಅನುಷ್ಠಾನದ ಅಡಿಯಲ್ಲಿ ಊಟ ನೀಡಲು ಹೊರಟಿರುವುದು ಸಂಘಟನೆ ಖಂಡಿಸುತ್ತದೆ ಎಂದು ಪ್ರತಿಭಟನಕಾರರು ಹೇಳಿದರು.
ಸಂಘಟನೆ ರಾಜ್ಯಪ್ರಧಾನ ಕಾರ್ಯದರ್ಶಿ ಮಾಲಿನ ಮೇಸ್ತಾ, ರಾಜ್ಯ ಅಧ್ಯಕ್ಷೆ ವರಲಕ್ಷ್ಮಿ, ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಖಜಾಂಚಿ ರಾಜಮ್ಮ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಹಳ್ಳಿ ಮಕ್ಕಳ ಸಂಘದ ಮುಖಂಡ ವೆಂಟರಮಣಪ್ಪ, ಮುಸ್ತಾಪ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur