Gudibande : ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ, ಸುರಸದ್ಮಗಿರಿ, ಅಮಾನಿಬೈರಸಾಗರ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ ಮೊದಲಾದ ಐತಿಹಾಸಿಕ ತಾಣಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ (S N Subbareddy) (Visit) ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು “ಗುಡಿಬಂಡೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಹಾಗೂ ಅಭಿವೃದ್ಧಿ ಮಾಡಲು ಬೇಡಿಕೆ ಇದೆ. ಇದೀಗ ಪ್ರವಾಸೋದ್ಯಮ ಇಲಾಖೆ ಸಚಿವರ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ನೀಡಿ ಕೆಲವೊಂದು ತಾಣಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಸುಮಾರು ₹200 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೂನ್ 19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿಯೇ ಈ ಡಿಪಿಆರ್ ಅನುಮೋದನೆ ಮಾಡಿಸಲು ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿ ಗುಡಿಬಂಡೆ ಅಮಾನಿಬೈರಸಾಗರ ಕೆರೆಯಲ್ಲಿ ಬೋಟಿಂಗ್, ಸುರಸದ್ದಗಿರಿ ಬೆಟ್ಟದ ಅಭಿವೃದ್ಧಿ, ವರ್ಲಕೊಂಡ ಬೆಟ್ಟದ ಭಾಗದಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಅನುಪಮ, ತಹಶೀಲ್ದಾರ್ ಸಿಗತ್ತುಲ್ಲಾ, ತಾ.ಪಂ ಇಒ ನಾಗಮಣಿ, ಪ.ಪಂ ಅಧ್ಯಕ್ಷ ವಿಕಾಸ್, ಎಚ್.ಪಿ ಲಕ್ಷ್ಮಿನಾರಾಯಣ, ಬ್ರಹ್ಮರಹಳ್ಳಿ ಮೂರ್ತಿ, ಪ್ರವಾಸೋದ್ಯಮ ಇಲಾಖೆಯ ಯಶ್ವಂತ್ ಉಪಸ್ಥಿತರಿದ್ದರು.