Mulabagal : ಮುಳಬಾಗಿಲು ನಗರದ ಶಿವಕೇಶವ ನಗರದ ಉದ್ಭವ ಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ (Udbava Lingeshwara Rathotsva) ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ರಥೋತ್ಸವದ ಪ್ರಯುಕ್ತ ದೇವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕಾರ ಮಾಡಿ ಹೋಮ, ಅಗ್ನಿಕುಂಡ, ಪಂಚಾಮೃತ, ಅಭಿಷೇಕ, ಮಹಾ ಮಂಗಳಾರತಿ, ಕಲ್ಯಾಣೋತ್ಸವ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥವನ್ನು ಎಳೆದರು. ಶಿವಕೇಶವ ನಗರದ ದೇವಾಲಯದಿಂದ ಮುತ್ಯಾಲಪೇಟೆಯವರೆಗೂ ಸಾಗಿದ ಮೆರವಣಿಗೆಯಲ್ಲಿ ಕೆಲವರು ರಥದ ಮೇಲೆ ಹೂ, ಬಾಳೆಹಣ್ಣು, ದವಣ, ಉಪ್ಪು ಮತ್ತಿತರರ ಪವಿತ್ರ ವಸ್ತುಗಳನ್ನು ಚೆಲ್ಲಿ ಹರಕೆ ಹಾಗೂ ಕೋರಿಕೆಗಳನ್ನು ಸಲ್ಲಿಸುತ್ತಿದ್ದರು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಸ್. ರವಿಶಂಕರ್, ಉಪಾಧ್ಯಕ್ಷ ಕಾವೇರಿ ನಾರಾಯಣಪ್ಪ, ಕಾರ್ಯದರ್ಶಿ ಸಂಪಂಗಿರಾಮಯ್ಯ, ಕೀಲಾಗಾಣಿ ಮಂಜುನಾಥ್, ಆಂಜನೇಯ ರೆಡ್ಡಿ, ಅನಂತ ಶಾಸ್ತ್ರಿ, ಸತ್ಯನಾರಾಯಣ ಶಾಸ್ತ್ರಿ, ವಿ. ಶ್ರೀನಿವಾಸ್, ನಾಗರಾಜಾಚಾರಿ, ಕಾವೇರಿ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.