Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ (National Rabies Control Programme) ಕುರಿತ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ (Coordinating Committee Meeting) ನಡೆಯಿತು.
ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ಹರಡುವ ರೇಬಿಸ್ ತೀವ್ರತರವಾದ ಸೋಂಕಾಗಿದ್ದು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಇದು ಮರಣಕ್ಕೂ ಕಾರಣವಾಗುತ್ತದೆ. ಮೊದಲು ಕೆಲವು ದಿನಗಳವರೆಗೆ ಸುಸ್ತು, ಕಚ್ಚಿದ ಸ್ಥಳದಲ್ಲಿ ನೋವು, ತಲೆನೋವು, ಗಂಟಲು ನೋವು, ಜ್ವರ, ಅತಿಯಾದ ಜೊಲ್ಲು ಸುರಿಸುವುದು, ನುಂಗಲು ತೊಂದರೆ, ನುಂಗಲು ಕಷ್ಟವಾಗುವುದರಿಂದ ನೀರಿನ ಭಯ, ಆತಂಕ, ಗಾಳಿಯ ಭಯ ಇವು ರೋಗದ ಲಕ್ಷಣಗಳಾಗಿವೆ. ಪ್ರಾಣಿಗಳು ಕಡಿದ ಭಾಗ ಹಾಗೂ ಸುತ್ತಮುತ್ತ ಸಾಬೂನು ಮತ್ತು ನೀರಿನಿಂದ ತೊಳೆದು ತಕ್ಷಣವೇ ಎಆರ್‌ವಿ ಲಸಿಕೆ ಪಡೆಯಬೇಕು ಎಂದು ಸಭೆಯಲ್ಲಿ ಹೇಳಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭಾಸ್ಕರ್ ಹೊಸದಾಗಿ ಜಾನುವಾರುಗಳನ್ನು ಖರೀದಿಸುವಾಗ ಇಲಿ ಜ್ವರದ ಸೋಂಕಿನಿಂದ ಮುಕ್ತವಾಗಿರುವ ಸಾಕಾಣಿಕೆ ಕೇಂದ್ರಗಳಿಂದ ಜಾನುವಾರುಗಳನ್ನು ಖರೀದಿಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳ ದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ ಹಾಗೂ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.