Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ‘ನುಲಿಯ ಚಂದಯ್ಯ ಜಯಂತಿ’ (Nuliya Chandaiya Jayanti) ಕಾರ್ಯಕ್ರಮವನ್ನು ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್ ಭಾಸ್ಕರ್ “ನುಲಿಯ ಚಂದಯ್ಯ 12ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡಿ ಸಮಾಜ ಸೇವೆ ಮಾಡಿದವರು. ಅವರ ವಚನಗಳನ್ನು ಓದಿದಾಗ ಗುರು, ಲಿಂಗ, ಜಂಗಮ ಮತ್ತು ಕಾಯಕ, ದಾಸೋಹ ಸೇವೆ ಎನ್ನುವ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಕಾಣುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅಪೂರ್ವ ಬಿದರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಿ.ಎಂ ರವಿಕುಮಾರ್, ಜಿಲ್ಲೆಯ ಕೊರಮ-ಕೊರಚ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಪಿ.ಚಿಕ್ಕಪ್ಪಯ್ಯ, ಗೌರವಾಧ್ಯಕ್ಷ ವೆಂಕಟರೋಣಸ್ವಾಮಿ, ಪರಮೇಶ್ವರ್, ಸಂಘ- ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.