Chikkaballapur : ರಾಜ್ಯ ಸರ್ಕಾರ ತೈಲ ಬೆಲೆ ಹೆಚ್ಚಳ (Petrol Price Hike) ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ (BJP Protest) ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್ “ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ, ಹಣ್ಣುಗಳ ದರ ಹೆಚ್ಚಾಗಲಿದ್ದು ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿರುವುದಕ್ಕಾಗಿ ತೈಲ ದರ ಹೆಚ್ಚಿಸಲಾಗಿದೆ. ಸರ್ಕಾರ ಕೂಡಲೇ ದರ ಏರಿಕೆ ಆದೇಶ ಹಿಂಪಡೆಯಬೇಕು. . ಒಂದು ಯುನಿಟ್ ವಿದ್ಯುತ್ ದರ ಬಿಜೆಪಿ ಕಾಲದಲ್ಲಿ ₹ 4 ಇದ್ದರೆ, ಕಾಂಗ್ರೆಸ್ ಆಡಳಿತದಲ್ಲಿ ₹ 7ಕ್ಕೆ ಹೆಚ್ಚಿದೆ. ಛಾಪಾ ಕಾಗದದ ಬೆಲೆ ನಮ್ಮ ಆಡಳಿತದಲ್ಲಿ ₹ 20ಕ್ಕೆ ದೊರೆಯುತ್ತಿತ್ತು. ಆದರೆ ಅದು ಈಗ ₹ 100 ತಲುಪಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹ 100ರ ಒಳಗೆ ಇದೆ. ಆದರೆ ಬೆಂಗಳೂರಿನಲ್ಲಿ ₹103ಕ್ಕೆ ತಲುಪಿದೆ. ನೀರಾವರಿ ಯೋಜನೆ ಇಲ್ಲ, ರಸ್ತೆ ಇಲ್ಲ, ಆಸ್ಪತ್ರೆ ನಿರ್ಮಿಸಿಲ್ಲ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ರಾಜಣ್ಣ, ಶಿವಾನಂದ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಅಜ್ಜವಾರ ಕೆ.ಆರ್.ರೆಡ್ಡಿ, ಮರಳುಕುಂಟೆ ಕೃಷ್ಣಮೂರ್ತಿ, ಆನಂದ್, ಕೆ.ವಿ.ನಾಗರಾಜ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.