Sidlaghatta : ರಾಷ್ಟ್ರೀಯ ನಾಡಹಬ್ಬಗಳ ಆಚರಣಾ ಸಮಿತಿಯಿ೦ದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಆಚರಣೆ ಮಾಡಲಾಯಿತು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ, ಮಾಡಿರುವ ತ್ಯಾಗವನ್ನು ಅರಿತಾಗ ದೇಶದ ಬಗ್ಗೆ ಪ್ರೀತಿ ಮೂಡುತ್ತದೆ. ಮುಂದಿನ ಪೀಳಿಗೆಗೆ ನಾವು ಅಭಿವೃದ್ಧಿಯಾದ ನಾಡನ್ನು ಉಳಿಸಿ ಹೋಗಬೇಕು. ಪರಿಸರ, ನೈರ್ಮಲ್ಯ, ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡುಗೆಯಾಗಿ ಕೊಡುವುದಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ. ಆಗ ಮಾತ್ರ ಹೋರಾಟಗಾರರ ಬಲಿದಾನ ಸಾರ್ಥಕವಾಗುತ್ತದೆ ಎಂದರು.
ದೇಶದ 140 ಕೋಟಿಗೂ ಹೆಚ್ಚು ಜನರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಲಕ್ಷಾಂತರ ಮಹನೀಯರ ತ್ಯಾಗ, ಬಲಿದಾನಗಳೇ ಕಾರಣ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹೋರಾಟಗಾರರನ್ನು ನೆನೆದು ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ದೇಶವನ್ನು ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನ ನಾವೆಲ್ಲರೂ ಸ್ಮರಿಸಬೇಕು. ನಾವೆಲ್ಲರೂ ಸಮಾಜಕ್ಕೆ ಕೈಲಾಗುವಷ್ಟು ಒಳ್ಳೆಯ ಕೆಲಸಗಳು ಮಾಡಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಕರು ಮುನ್ನಡೆಯಬೇಕು ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ವಂದೇ ಮಾತರಂ ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ಮೂವರು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯಿಂದ ನೀಡಿದ್ದ ಲ್ಯಾಪ್ ಟಾಪ್ ವಿತರಿಸಲಾಯಿತು.
ನೆಹರೂ ಕ್ರೀಡಾಂಗದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ದೇಶ ಭಕ್ತಿ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆಯುವಂತಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಓ ಹೇಮಾವತಿ, ಜೆಡಿಎಸ್ ಹಿರಿಯ ಮುಖಂಡ ಬಂಕ್ ಮುನಿಯಪ್ಪ. ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.