Abludu, Sidlaghatta : ಸಂಗೀತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಜಾತಿ ಮತ ಧರ್ಮ ಭಾಷೆಯ ಗಡಿ ಮೀರಿ ಜಗತ್ತಿನ ಎಲ್ಲರನ್ನೂ ಒಂದುಗೂಡಿಸುವಷ್ಟು ಸಶಕ್ತವಾಗಿವೆ. ಹಾಗಾಗಿಯೆ ಕ್ರೀಡೆಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಹಾಗೂ ತಾಲ್ಲೂಕಿನ ಅಬ್ಲೂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಗ್ರಾಮೀಣ ಭಾಗದಲ್ಲಿ ಎಲ್ಲರೂ ಸೇರಿ ಅನೇಕ ರೀತಿಯ ಕ್ರೀಡೆಗಳನ್ನು ಆಡುತ್ತಿದ್ದರು. ಅವೆಲ್ಲವೂ ಇದೀಗ ಮಾಯವಾಗಿವೆ. ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಅಂಕ ಗಳಿಸುವುದೆ ಮುಖ್ಯವಾಗಿವೆ. ಹಾಗಾಗಿ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಕಡಿಮೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ಮಾನವೀಯ ಸಂಬಂಧಗಳು ಕಡಿಮೆ ಆಗುತ್ತಿದೆ. ಪರಿಸ್ಪರ ಹೊಂದಾಣಿಕೆಯ ಭಾವನೆ ಮಾಯವಾಗುತ್ತಿದೆ. ಸರಕಾರವು ಕ್ರೀಡೆಗಳನ್ನು ನಡೆಸುವಂತಾಗಿದ್ದು ಅವಷ್ಟೆ ನಡೆಯುತ್ತಿವೆ. ಇವುಗಳಲ್ಲಿಯಾದರೂ ಭಾಗವಹಿಸಿ ಕ್ರೀಡೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದರು.
ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಇದು ದೈಹಿಕ ಮಾನಸಿಕ ಸದೃಡತೆಯನ್ನು ಹೆಚ್ಚಿಸುತ್ತದೆಯಲ್ಲದೆ ಇದರಿಂದ ಪರಸ್ಪರ ಹೊಂದಾಣಿಕೆ ಸಹೋದರತ್ವ ಕ್ರೀಡೆ ಹಾಗೂ ದೇಶ ಪ್ರೇಮ ಹೆಚ್ಚುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಶಾಲಾ ಕಾಲೇಜು ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡುವಂತೆ ಶಾಲಾ ಕಾಲೇಜು ಮತ್ತು ಮನೆಗಳಲ್ಲಿ ಪೂರಕ ವಾತಾವರಣ ನಿರ್ಮಿಸಬೇಕೆಂದರು. ಕ್ರೀಡೆಗಳ ಬಗ್ಗೆ ಆಸಕ್ತಿ, ಪ್ರೇಮ ಮೂಡಿಸುವ ಕೆಲಸ ಆಗಬೇಕು. ಆಗಲೆ ಕ್ರೀಡೆಗಳ ಮಹತ್ವ ಎಲ್ಲರಿಗೂ ಅರಿವಾಗಲಿದೆ ಮತ್ತು ಮಹತ್ವವೂ ಪಡೆಯಲಿದೆ ಎಂದರು.
ಗ್ರಾಮಸ್ಥರಿಗೆ ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಗೋಣಿಚೀಲ ಓಟ, ಚಮಚ ನಿಂಬೆ ಹಣ್ಣಿನ ಓಟ ಸೇರಿದಂತೆ ವಿವಿದ ಕ್ರೀಡೆಗಳನ್ನು ನಡೆಸಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ ದೇವರಾಜ್,ಉಪಾಧ್ಯಕ್ಷೆ ಬಿ.ಕೆ.ಭಾರತಿ ಆಂಜಿನಪ್ಪ, ಭಿನ್ನಮಂಗಲ ಗಂಗಾಧರ್,ಮುಖ್ಯ ಶಿಕ್ಷಕ ವೆಂಕಟೇಶಪ್ಪ,ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಭಾರತಿ ಆಂಜಿನಪ್ಪ,ಗ್ರಾಮದ ಮುಖಂಡರಾದ ವೆಂಕಟರೆಡ್ಡಿ,ಕೇಶವ ಗ್ರಾಮಸ್ಥರು,ಶಾಲಾ ಶಿಕ್ಷಕರು ಹಾಜರಿದ್ದರು.