Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಮೇಲೆ ಆಗಸ್ಟ್ 15 ರಂದು ರಾಷ್ಟ್ರಧ್ವಜವನ್ನು ಹಾರಿಸದೆ ಅಗೌರವ ಸಲ್ಲಿಸಿದ್ದಾರೆ, ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಗಸ್ಟ್ 15 ರಂದು ಜಿ.ಪಿ.ಎಸ್ ದಾಖಲೆಗಳಿರುವ ಸಮಯ, ದಿನಾಂಕವನ್ನು ಸೂಚಿಸುವ ಫೋಟೋಗಳನ್ನು ಗ್ರಾಮಸ್ಥರು ಪತ್ರಿಕೆಗೆ ನೀಡಿ, ಈ ವಿಷಯದ ಕುರಿತಾಗಿ ಹಾಲು ಉತ್ಪಾದಕರ ಸಹಕಾರ ಸಂಘದವರಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
“ಗ್ರಾಮ ಪಂಚಾಯಿತಿ ಮತ್ತು ಸಹಕಾರ ಸಂಘಗಳು ಕಡ್ಡಾಯವಾಗಿ ಆಗಸ್ಟ್ 15 ರಂದು ರಾಷ್ಟ್ರಧ್ವಜವನ್ನು ಹಾರಿಸಬೇಕು. ಭಾರತೀಯ ಧ್ವಜಸಂಹಿತೆ 2002/3 ಅನುಚ್ಛೇದ 1 ರಂತೆ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸೂಚಿಸಬೇಕು. ಅದನ್ನು ಉಲ್ಲಂಘಿಸಿದರೆ ತಪ್ಪಾಗುತ್ತದೆ” ಎಂದು ಭಾರತ ಸೇವಾದಳ ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ತಿಳಿಸಿದರು.