Sidlaghatta : ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಮಕ್ಕಳಿಗೆ ಪಾಠ ಹೇಳುವುದಕ್ಕಿಂತ ಅವರಿಂದಲೇ ತರಕಾರಿ ಹಣ್ಣುಗಳ ವೇಷ ತೊಡಿಸಿ ಅವುಗಳ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಹೊರವಲಯದ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಹಣ್ಣು ಮತ್ತು ತರಕಾರಿಗಳ ದಿನದ ಅಂಗವಾಗಿ ಶನಿವಾರ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಂದ ಆಯೋಜಿಸಲಾಗಿದ್ದ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಮತ್ತು ವೇಷಭೂಷಣಗಳ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಟ್ಟ ಮಕ್ಕಳಿಗೆ ಉತ್ತಮ ತರಕಾರಿ ಹಣ್ಣುಗಳನ್ನು ತಿನ್ನಲು ಕೊಡುವ ಮೂಲಕ ಅವರ ಆರೋಗ್ಯ, ಮನಸ್ಸು ಮತ್ತು ಬುದ್ಧಿಯ ಬೆಳವಣಿಗೆ ಆಗುತ್ತದೆ. ಪ್ರತಿಯೊಬ್ಬರೂ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದನ್ನು ಆನಂದಿಸಲು ಹಲವು ಕಾರಣಗಳಿವೆ. ತರಕಾರಿಗಳು ಮತ್ತು ಹಣ್ಣುಗಳು ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲದಂತಹ ಪ್ರಮುಖ ಜೀವಸತ್ವಗಳನ್ನು ಒದಗಿಸುತ್ತವೆ ಎಂದು ವಿವರಿಸಿದರು.
ಯಾವುದೇ ಒಂದು ಆಹಾರವನ್ನು ನೀಡುವ ಮುಂಚೆ ಅದರ ಗುಣಮಟ್ಟ ಮತ್ತು ಅದು ನಮ್ಮ ಮಗುವಿನ ದೇಹಕ್ಕೆ ನಿಜವಾಗಲೂ ಆರೋಗ್ಯಕರವೇ ಅಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಬಲವಂತವಾಗಿ ಮಕ್ಕಳ ಮನಸ್ಸಿನ ಮೇಲೆ ಇಷ್ಟವಿಲ್ಲದ ಆಹಾರ ಪದಾರ್ಥಗಳನ್ನು ತಿನ್ನುವಂತೆ ಒತ್ತಡ ಹಾಕಬಾರದು. ಮಕ್ಕಳ ಸೂಕ್ಷ್ಮ ಆರೋಗ್ಯಕ್ಕೆ ಅನುಕೂಲ ಎನ್ನುವಂತಹ ಆಹಾರ ಪದಾರ್ಥಗಳನ್ನು ತಿನ್ನಲು ನೀಡುವುದು ಜಾಣತನ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ಕಾಲೇಜಿನ ಪ್ರಾಂಶುಪಾಲ ಕೆ.ಮಹದೇವ್, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.