20.6 C
Bengaluru
Saturday, December 7, 2024

“ಬೋದಗೂರು ಕೃಷಿ ಕ್ರಾಂತಿ” ಕಾರ್ಯಕ್ರಮದಲ್ಲಿ “ರಾವೆ ದರ್ಪಣ” ಪುಸ್ತಕ ಬಿಡುಗಡೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಬುಧವಾರ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೆಯ ದಿನದ ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿಯ “ಬೋದಗೂರು ಕೃಷಿ ಕ್ರಾಂತಿ” ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ಬಿ.ಪ್ರಕಾಶ್ ಮಾತನಾಡಿದರು.

ನಾಲ್ಕು ಗೋಡೆಯ ಮಧ್ಯೆ ಕಲಿಯುವ ಕಲಿಕೆಯ ಜೊತೆಗೆ ರೈತರೊಂದಿಗೆ ಒಡನಾಡಿ ಕಲಿಯುವ ಕಲಿಕೆ ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಮೂಲ ದ್ರವ್ಯ ಒದಗಿಸುತ್ತದೆ. ಗ್ರಾಮೀಣ ಪರಿಸ್ಥಿತಿಯನ್ನು ವಿದ್ಯಾರ್ಥಿಗಳು ಅವಲೋಕಿಸಬೇಕು. ಕೃಷಿ ಸಮಸ್ಯೆಗಳನ್ನು ಅರಿಯಬೇಕು, ವಿಶ್ಲೇಷಿಸಬೇಕು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಕಾರ್ಯತತ್ಪರರಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಜಾಗೃತಿಯ ಕಾರ್ಯಾನುಭವದಲ್ಲಿ ಮೂರು ತಿಂಗಳು ಹಳ್ಳಿಯಲ್ಲಿ ಕೃಷಿ ಪದವಿ ವಿದ್ಯಾರ್ಥಿಗಳು ವಾಸ ಮಾಡಿದ್ದರು ಎಂದು ಅವರು ತಿಳಿಸಿದರು.

 ವಿದ್ಯಾರ್ಥಿಗಳ ಮೂರು ತಿಂಗಳ ಕಾರ್ಯಚಟುವಟಿಕೆಗಳ ಚಿತ್ರ ಸಹಿತ ಮಾಹಿತಿಯುಳ್ಳ ಪುಸ್ತಕ “ರಾವೆ ದರ್ಪಣ”ವನ್ನು ಬಿಡುಗಡೆ ಮಾಡಿದ ಶಿಡ್ಲಘಟ್ಟ ರೇಷ್ಮೆ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, “ರೈತರಿಂದ ಕಲಿಯುವುದು ಮತ್ತು ರೈತರಿಗೆ ಕಲಿಸುವುದು” ಎಂಬ ಉದ್ದೇಶದಿಂದ ಗ್ರಾಮೀಣ ಜಾಗೃತಿಯ ಕಾರ್ಯಾನುಭವದಲ್ಲಿ ಮೂರು ತಿಂಗಳು ಹಳ್ಳಿಯಲ್ಲಿ ವಾಸಿಸಿದ ವಿದ್ಯಾರ್ಥಿಗಳು ಬೋದಗೂರಿನ ಮನೆಮಕ್ಕಳಾಗಿದ್ದಾರೆ.

 ವಿದ್ಯಾರ್ಥಿಗಳು ತಮ್ಮ ತೊಂಬತ್ತು ದಿನಗಳ ಗ್ರಾಮ ಜೀವನದಲ್ಲಿ ಹತ್ತು ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಕೇವಲ ಕೃಷಿಯ ಬಗ್ಗೆ ಕಲಿತರೆ ಸಾಲದು. ಗ್ರಾಮೀಣ ಜನರ ಅಂತಃಕರಣ, ಸಹಾಯ ಮಾಡುವ ಗುಣ, ಅಪರಿಚಿತರಾದವರನ್ನೂ ಮನೆಮಕ್ಕಳಂತೆ ಆದರಿಸುವ ವಾತ್ಸಲ್ಯ ಮನೋಭಾವ, ಹಂಚಿಕೊಂಡು ತಿನ್ನುವ ಮನೋಧರ್ಮ, ಶ್ರಮ ಜೀವನ, ಅತಿ ಆಸೆ ಪಡದಿರುವ ಬುದ್ಧಿ, ಇವುಗಳನ್ನೆಲ್ಲಾ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೆಯ ದಿನದಂದು ಅವರ ಗ್ರಾಮ ವಾಸದ ಅನುಭವವನ್ನು ವೈವಿಧ್ಯಮಯ ಬೆಳೆ, ವಸ್ತು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗಿತ್ತು. ಬೀಜೋಪಚಾರ, ಎರೆಹುಳುಗೊಬ್ಬರ, ರಸಮೇವಿನ ತಯಾರಿಕೆ, ಕೃಷಿಹೊಂಡ, ನೀರನ್ನು ಸದ್ಭಳಕೆ ಮಾಡಿಕೊಳ್ಳುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು, ಸೋಲಾರ್ ಶಕ್ತಿಯ ಸದ್ಭಳಕೆ ಮುಂತಾದವುಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳ ವಿವಿಧ ಮಳಿಗೆಗಳ ಮೂಲಕವೂ ರೈತರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದರು.

 ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ವಿವಿಧ ಬೆಳೆಗಳ ತಳಿಗಳು ಸಾವಯವ ಉತ್ಪನ್ನಗಳು, ಬೋದಗೂರು ಗ್ರಾಮ ನಕ್ಷೆ, ಗ್ರೀನ್ ಹೌಸ್, ಕೃಷಿ ವಿಶ್ವವಿದ್ಯಾಲಯದ ಕುರಿತು ಮಾಹಿತಿ, ಮನೆಯಲ್ಲೇ ಕುಟುಂಬಕ್ಕೆ ಬೇಕಾದ ತರಕಾರಿ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆ, ಬೆಳೆಗಳಿಗೆ ತಗುಲುವ ರೋಗಗಳ ಹತೋಟಿ, ಕೃಷಿ ಉತ್ಪನ್ನಗಳಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಪದಾರ್ಥಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.

 ಕೃಷಿ ವಿಶ್ವವಿದ್ಯಾನಿಲಯದ ಡಾ.ಕೆ.ಮುರಳಿ ಮೋಹನ್, ಡಾ.ಸಿ.ನಾರಾಯಣಸ್ವಾಮಿ, ಡಾ.ಎಸ್.ಗಣೇಶಮೂರ್ತಿ, ಡಾ.ಸಂದೀಪ್, ಡಾ.ಪುಷ್ಪ, ಡಾ.ಸವಿತಾ, ಶಿಬಿರಾಧಿಕಾರಿ ಡಾ.ವೈ.ಎನ್.ಶಿವಲಿಂಗಯ್ಯ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಪಶುವೈದ್ಯಾಧಿಕಾರಿ ಡಾ.ಬಿ.ಕೆ.ರಮೇಶ್, ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಸದಸ್ಯರಾದ ವಿಜಯೇಂದ್ರ, ವಿಶ್ವಾಸ್, ಬಿ.ಎನ್.ಸಂತೋಷ್ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!