Sidlaghatta : ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇದೀಗ ಇರುವ ನೂತನ ಪಿಂಚಣಿ ಯೋಜನೆ(ಎನ್.ಪಿ.ಎಸ್ ಪಿಂಚಣಿ)ಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕೆಂದು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಶಿಕ್ಷಕ ವಿ.ಎನ್.ಗಜೇಂದ್ರ ಆಗ್ರಹಿಸಿದರು.
ನಗರದಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ ಸಮಿತಿಯನ್ನು ರಚಿಸಿದ್ದು ಸಮಿತಿಯು ನೀಡುವ ವರದಿಯ ಅನ್ವಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದಾಗಿ ತಿಳಿಸಿದ್ದು ಅದರಿಂದ ಏನೂ ಉಪಯೋಗ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೆ ಎರಡು ಸಮಿತಿಗಳನ್ನು ರಚಿಸಿದ್ದು ಆ ಎರಡೂ ಸಮಿತಿಗಳು ಒಂದೆ ಒಂದೆ ಸಭೆ ನಡೆಸಿಲ್ಲ. ಅಧ್ಯಯನವನ್ನೂ ನಡೆಸಿಲ್ಲ. ವರದಿಯನ್ನೂ ನೀಡಿಲ್ಲ. ಆದರೆ ಇದೀಗ ಮತ್ತೆ ಮೂರನೇ ಸಮಿತಿಯನ್ನು ರಚಿಸಿದ್ದಾರೆ. ಇದು ಅವಶ್ಯತೆ ಇತ್ತಾ ಎಂದು ಪ್ರಶ್ನಿಸಿದರು.
ಕೊಟ್ಟ ಮಾತಿನಂತೆ ನಿಶ್ಚಿತ ಮಾಶಾಸನ ಯೋಜನೆಯನ್ನು ಜಾರಿ ಮಾಡಲು ಯಾವುದೆ ಅಡ್ಡಿ ಆತಂಕ ಇಲ್ಲ. ಆದರೆ ಸುಖಾ ಸುಮ್ಮನೆ ಮುಂದೂಡುವುದಕ್ಕಾಗಿ ಈ ರೀತಿಯಲ್ಲಿ ಸಮಿತಿಗಳನ್ನು ರಚಿಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವಂತೆ ಮನವಿ ಮಾಡಿದರು.
ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿ ಮಾತನಾಡಿ, 2006 ರ ನಂತರ ನೇಮಕಗೊಂಡ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಇದೆ. ಅದರಿಂದ ಅಷ್ಟಾಗಿ ಏನೂ ಉಪಯೋಗವಿಲ್ಲ. ಆದರೆ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಹಳೆಯ ನಿಶ್ಚಿತ ಪಿಂಚಣಿ, ನೂತನ ಪಿಂಚಣಿ ಯೋಜನೆ ಯಾವುದೂ ಇಲ್ಲ.
ಅನುದಾನಿತ ಶಾಲಾ ಆಡಳಿತ ಮಂಡಳಿಗಳು ಒಪ್ಪದ ಕಾರಣ ಅಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಶಿಕ್ಷಕರು ಒ.ಪಿ.ಎಸ್, ಎನ್.ಪಿ.ಎಸ್.ನ ಯಾವುದೆ ಯೋಜನೆಯ ಲಾಭವಿಲ್ಲದೆ ಬರಿಗೈಲಿ ಮನೆಗೆ ಹೋಗುವಂತಾಗಿದೆ ಎಂದು ಅವಲತ್ತುಕೊಂಡರು.
ಎನ್.ಪಿ.ಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಹ ಕಾರ್ಯದರ್ಶಿ ಎನ್.ಸರಿತ, ಸಂಘಟನಾ ಕಾರ್ಯದರ್ಶಿ ನಬೀಬುಲ್ಲಾ ಹಾಜರಿದ್ದರು.