Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಂಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಗಾರುಡಿಬೊಂಬೆ, ಕೀಲುಕುದುರೆ, ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ತಹಶೀಲ್ದಾರ್ ಬಿ.ಎಸ್.ರಾಜೀವ್ ರಥೋತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಎಂ.ರಾಜಣ್ಣ, ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶಮೂರ್ತಿ, ದೇವಾಲಯ ಸೇವಾ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur