23.3 C
Bengaluru
Thursday, June 19, 2025

ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ಸಿಂಗ್ ಘಟಕ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

- Advertisement -
- Advertisement -

Dibburahalli, sidlaghatta : ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಬೈರೇನಹಳ್ಳಿ ಗ್ರಾಮದ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ಸಿಂಗ್ ಘಟಕ ಸ್ಥಾಪನೆಯ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಯಾವುದೇ ರೀತಿಯ ಪರವಾನಗಿ ನೀಡಬಾರದು ಎಂಬ ಧ್ವನಿಯನ್ನು ವ್ಯಕ್ತಪಡಿಸಿ, ಗ್ರಾಮಸ್ಥರು ದಿಬ್ಬೂರಹಳ್ಳಿ ಗ್ರಾಮಪಂಚಾಯತಿ ಪಿಡಿಒ ರಮೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪುರ್ವೈರೇನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ದಶಕಗಳಿಂದ ಸಾಂಪ್ರದಾಯಿಕವಾಗಿ ಕಲ್ಲು ತೆಗೆಯುವ ಮೂಲಕ ಬದುಕು ಸಾಗಿಸುತ್ತಿರುವ ಸ್ಥಳೀಯರು, ಈ ಹೊಸ ಯೋಜನೆಯಿಂದ ತಮ್ಮ ಬದುಕಿಗೆ ಬೆದರಿಕೆ ಉಂಟಾಗುತ್ತದೆ ಎಂದು ಭಯ ವ್ಯಕ್ತಪಡಿಸಿದ್ದಾರೆ. ಇವರ ಪರವಾಗಿ ಮಾತನಾಡಿದ ಡಿಎಸ್‌ಎನ್ ರಾಜು, “ಈ ಪ್ರದೇಶದಲ್ಲಿ ಐವತ್ತು-ಅರವತ್ತು ವರ್ಷಗಳಿಂದ ಅನೇಕರು ಸಾಂಪ್ರದಾಯಿಕವಾಗಿ ಕಲ್ಲು ಹೊಡೆದು ಬದುಕು ಸಾಗಿಸುತ್ತಿದ್ದಾರೆ. ಈಗ ಡಿ.ಗೋವಿಂದರಾಜು ಎಂಬವರು ಸರ್ಕಾರದ ವಿವಿಧ ಇಲಾಖೆಗಳ ಅನುಮತಿ ಪಡೆದು ಗ್ರಾನೈಟ್ ಘಟಕ ಸ್ಥಾಪನೆಗೆ ಗ್ರಾಮಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಿಂದ ಸ್ಥಳೀಯರು ದುಡ್ಡಿಲ್ಲದೆ ಬೀದಿಗೆ ಬಿದ್ದೂ ಹೋಗಬಹುದಾದ ಭಯವಿದೆ” ಎಂದು ಹೇಳಿದರು.

ಅವರು ಮುಂದುವರೆದು, “ಇದುವರೆಗೆ ಕ್ಷೇತ್ರದ ಮಾಜಿ ಶಾಸಕರಾದ ವಿ. ಮುನಿಯಪ್ಪ, ಎಸ್. ಮುನಿಶಾಮಪ್ಪ, ಎಂ. ರಾಜಣ್ಣ ಹಾಗೂ ಪ್ರಸ್ತುತ ಶಾಸಕ ಬಿ.ಎನ್. ರವಿಕುಮಾರ್ ಕೂಡ ಇಂತಹ ಘಟಕಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ಕೆಲ ಗ್ರಾಮಪಂಚಾಯತಿ ಸದಸ್ಯರು ಮಾತ್ರ ಅದಾಯದ ದೃಷ್ಟಿಯಿಂದ ಪರವಾನಗಿ ನೀಡಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.

ಪಿಡಿಒ ರಮೇಶ್ ಈ ಕುರಿತು ಸ್ಪಷ್ಟನೆ ನೀಡುತ್ತಾ, “ಡಿ. ಗೋವಿಂದರಾಜು ಅವರು ಸರ್ವೆ ನಂ. 43ರಲ್ಲಿ 2 ಎಕರೆ ಹಾಗೂ ಸರ್ವೆ ನಂ. 45ರಲ್ಲಿ 1 ಎಕರೆ 30 ಗುಂಟೆ ಭೂಮಿಯಲ್ಲಿ ಘಟಕ ಸ್ಥಾಪನೆಗೆ ಭೂ ಪರಿವರ್ತನೆ ಮಾಡಿಕೊಂಡು, ಇ ಖಾತೆ ಹಾಗೂ ಸಾಮಾನ್ಯ ಪರವಾನಗಿ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಗ್ರಾಮಸಭೆಯಲ್ಲಿ ಮಂಡಿಸಿದಾಗ 8 ಸದಸ್ಯರು ಪರವಾನಗಿ ನೀಡಲು ಒಪ್ಪಿಗೆ ಸೂಚಿಸಿದ್ದು, 6 ಸದಸ್ಯರು ವಿರೋಧಿಸಿದರು. ಬಹುಮತದ ಆಧಾರದಲ್ಲಿ ತೀರ್ಮಾನ ಕೈಗೊಂಡು ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ಹೇಳಿದರು.

ಗ್ರಾಮಪಂಚಾಯತಿ ಸದಸ್ಯ ಡಿ.ಪಿ. ನಾಗರಾಜ್ ಮಾತನಾಡುತ್ತಾ, “ಸಾಂಪ್ರದಾಯಿಕ ಕಲ್ಲು ಹೊಡೆಯುವ ಮೂಲಕ ಯಾವುದೇ ತೆರಿಗೆ, ಶುಲ್ಕ ಪಾವತಿ ಇಲ್ಲದಂತೆ ಗುತ್ತಿಗೆದಾರರು ಉದ್ಯಮ ನಡೆಸುತ್ತಿದ್ದಾರೆ. ಆದರೆ ಈ ಹೊಸ ಘಟಕದಿಂದ ಪಂಚಾಯತಿಗೆ ವಾರ್ಷಿಕ 50 ಲಕ್ಷ, ಸರ್ಕಾರಕ್ಕೆ ಸುಮಾರು 100 ಕೋಟಿ ರೂ. ರಾಯಲ್ಟಿ ಲಭಿಸುತ್ತದೆ. ಸುಮಾರು 1500 ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲಿದೆ. ಈ ಕಾರಣದಿಂದ ನಾವು ಪರವಾನಗಿ ನೀಡಲು ನಿರ್ಧರಿಸಿದ್ದೇವೆ” ಎಂದರು.

ಹಿರಿಯ ಸದಸ್ಯ ಡಾ. ಧನಂಜಯರೆಡ್ಡಿ ಮಾತನಾಡಿ, “ಆರು ಸದಸ್ಯರು ಪರಿಸರದ ಹಾಗೂ ಸ್ಥಳೀಯರ ಹಿತದ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಿದ್ದರೂ ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕಾಯಿತು” ಎಂದು ಸಭೆಯ ವಿವರ ನೀಡಿದರು.

ಚರ್ಚೆ ಹಾಗೂ ವಾದವಿವಾದಗಳ ನಂತರ, ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಇ ಖಾತೆ ಮತ್ತು ಪರವಾನಗಿ ತೀರ್ಮಾನವನ್ನು ಮರುಪರಿಶೀಲನೆಗೊಳಪಡಿಸಲು, ಸಂಬಂಧಿತ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿ, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!