22.4 C
Bengaluru
Sunday, December 8, 2024

2 ಲಕ್ಷ ಕೊಳವೆಬಾವಿಗಳು ಅಂತರ್ಜಲವನ್ನು ಹೀರುತ್ತಿವೆ

- Advertisement -
- Advertisement -

Sidlaghatta : ಅವಿಭಾಜ್ಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರಸ್ತುತ ಎರಡು ಲಕ್ಷ ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಅಂತರ್ಜಲ ಮರು ಪೂರಣಕ್ಕೂ, ಹೊರತೆಗೆಯುತ್ತಿರುವ ನೀರಿಗೂ, ಹಾಗೆಯೇ ರೈತರು ಕೊಳವೆಬಾವಿಗಳಿಗಾಗಿ ಮಾಡಿರುವ ಖರ್ಚಿಗೂ ಅವರ ಉತ್ಪನ್ನಗಳಿಗೆ ಬರುವ ಬೆಲೆಗೂ ಸಹ ತಾಳೆಯಾಗುತ್ತಿಲ್ಲ ಎಂದು ಶಾಶ್ವತ ನೀರಾವರಿ ಯೋಜನೆ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ತಾಲ್ಲೂಕಿನ ಮಳ್ಳೂರು ಸಮೀಪದ ಅಂಕತಟ್ಟಿ ಗೇಟ್ ನ ಏಸ್.ಎನ್.ಫಾರಂನಲ್ಲಿ ಶನಿವಾರ ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ಆಯೋಜಿಸಿದ್ದ “ನೀರಾವರಿ ಯೋಜನೆಗಳು – ಸಾಧಕ ಬಾಧಕಗಳು” ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂದು ಕೊಳವೆಬಾವಿ ಕಾರ್ಯನಿರ್ವಹಿಸುತ್ತಿದೆ ಎಂದರೆ ಅದರ ಹಿಂದೆ ನೀರಿಲ್ಲದ ಕನಿಷ್ಟ ಮೂರಾದರೂ ಕೊಳವೆಬಾವಿಗಳಿರುತ್ತವೆ. ಆರ್ಥಿಕ ಹಿನ್ನೆಲೆಯಿಂದ ಸುಮಾರು ಆರೇಳು ಲಕ್ಷ ಕೊಳವೆಬಾವಿಗಳನ್ನು ಕೊರೆಸಿರುವುದನ್ನು ಗಮನಿಸಿದಾಗ ರೈತರ ಸಂಕಷ್ಟದ ಪರಿಸ್ಥಿತಿ ಅರಿವಾಗುತ್ತದೆ. ಒಂದು ಕೊಳವೆಬಾವಿ ಒಬ್ಬ ರೈತನ ಜೀವಮಾನ ಪೂರ್ತಿ ಇರುವುದಿಲ್ಲ. ಅದರದ್ದು ಅತ್ಯಲ್ಪ ಆಯುಷ್ಯ ಎಂದು ಹೇಳಿದರು.

ಕುಡಿವ ನೀರಿನ ವಿಚಾರವಾಗಿ ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ನಾನಾ ಅಧ್ಯಯನಗಳು ನಡೆದಿವೆ. ಬಾಗೇಪಲ್ಲಿ, ಗುಡಿಬಂಡೆ ಸೇರಿದಂತೆ ಬಹಳಷ್ಟು ಕಡೆಗಳ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಿದೆ ಎಂಬುದು ದಶಕದ ಆತಂಕ.

ಫ್ಲೋರೈಡ್‌ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮೂರು ವರ್ಷಗಳ ಹಿಂದೆ ಅಂತರ್ಜಲದಲ್ಲಿ ಮಿತಿ ಮೀರಿದ ಯುರೇನಿಯಂ ಸೇರಿರುವುದು ವಿಜ್ಞಾನಿಗಳು ತಿಳಿಸಿದ್ದರು. ಈ ವಿಚಾರಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಪೂರ್ಣ ಸಂಸ್ಕರಣೆಗೊಳ್ಳದ ನೀರಿನಿಂದ ಕಲುಷಿತಗೊಂಡ ಅಂತರ್ಜಲ, ಹಣ್ಣು ತರಕಾರಿಗಳಲ್ಲಿ ಕಂಡು ಬರುತ್ತಿರುವ ವಿಷಕಾರಿ ಅಂಶಗಳಿಂದಾಗಿ ನಗರವಾಸಿಗಳಿಗೆ ನಮ್ಮ ಜಿಲ್ಲೆಯ ರೈತರ ಉತ್ಪನ್ನಗಳ ಬಗ್ಗೆ ಭಯವುಂಟಾಗಿರುವುದು ದುರಂತ ಎಂದು ಹೇಳಿದರು.

ತೋಟಗಾರಿಕೆ ತಜ್ಞ ಡಾ.ಎಸ್.ವಿ.ಹಿತ್ತಲಮನಿ ಮಾತನಾಡಿ, ನೀರನ್ನು ಅನವಶ್ಯಕವಾಗಿ ಪೋಲು ಮಾಡದಂತೆ ಎಚ್ಚರ ವಹಿಸುವುದು, ಮಳೆ ನೀರು ಕೋಯ್ಲು ಮೂಲಕ ಮಳೆ ನೀರಿನ ಶೇಖರಣೆ ಮತ್ತು ಬಳಕೆಯಂಥಹ ಕೆಲವು ಉಪಕ್ರಮಗಳು ಎಲ್ಲರಿಂದ ಆಗಬೇಕು.

ಜಿಲ್ಲೆಯ ಜೀವನದಿಗಳು ಬತ್ತಿಹೋಗಿರುವುದರಿಂದ ಆಕಾಶಗಂಗೆಯೇ(ಮಳೆ) ಇನ್ನು ಮುಂದೆ ಆಸರೆ. ಬೆಂಗಳೂರಿನಿಂದ ಹರಿದು ಬರುತ್ತಿರುವ ತ್ಯಾಜ್ಯದ ನೀರಿನಿಂದ ಕ್ರಮೇಣ ತೊಂದರೆಯಾಗುತ್ತದೆ ಎಂದರು.

ಸಾಹಿತಿ ಇಂದಿರಾ ಶಿವಣ್ಣ ಮಾತನಾಡಿ, ಕಾರ್ಮಿಕರು ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ವತಿಯಿಂದ ರೈತರ ಬಗೆಗಿನ ಕಾಳಜಿಯಿಂದ ನೀರಿನ ಸಮಸ್ಯೆ ಕುರಿತಾಗಿ ಸಂವಾದ ಏರ್ಪಡಿಸಿರುವುದು ಈಗಿನ ತುರ್ತಿಗೆ ಸ್ಪಂದನೆಯಾಗಿದೆ. ಕಲುಷಿತವಾದ ತ್ಯಾಜ್ಯದ ನೀರಿನಿಂದ ಬೆಳೆದ ತರಕಾರಿ ತಿನ್ನಲು ಭಯಪಡುವ ಸ್ಥಿತಿ ಮೂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯು ವಾರ್ಷಿಕವಾಗಿ ಕೊಡುವ ನೊಳಂಬಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ನೀರಾವರಿ ಇತಿಹಾಸಕಾರ ಹಾಗೂ ಸಂಶೋಧಕ ಡಾ.ಟಿ.ವಿ.ನಾಗರಾಜ (ತಳಗವಾರ ನಾಗಣ್ಣ) ಅವರನ್ನು ಸನ್ಮಾನಿಸಲಾಯಿತು.

ಎಚ್.ಎಂ.ಕೆ.ಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕಾಳಪ್ಪ, ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣಸ್ವಾಮಿ, ಭಕ್ತರಹಳ್ಳಿ ಮುನೇಗೌಡ, ಸಾಹಿತಿ ಕಲ್ವಮಂಜಲಿ ಗೋಪಾಲಗೌಡ, ಡಾ.ಎನ್.ಸಿ.ಪಟೇಲ್, ಏರ್ ವೈಸ್ ಮಾರ್ಷಲ್ ನಾಗರಾಜ್, ತೋಟಗಾರಿಕೆ ಸಹಾಯಕ ನಿರ್ದೇಶಕ ಗೋಪಾಲ್, ಚಂದ್ರಶೇಖರ್ ಹಡಪದ್ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!