Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೇನಹಳ್ಳಿ ಗ್ರಾಮದಲ್ಲಿ Virbac ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಶುದ್ಧ ನೀರಿನ ಘಟಕ (Drinking Water Plant) ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕುಪ್ಪೇನಹಳ್ಳಿ ಗ್ರಾಮದಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೇಟ್ ಲಿಮಿಟೆಡ್ (Virbac Animal Health India Pvt. Ltd.) ವತಿಯಿಂದ ಶುದ್ಧ ನೀರಿನ ಘಟಕವನ್ನು ದೇಣಿಗೆ ನೀಡಲಾಯಿತು. ಸಾಮಾಜಿಕ ಅಭಿವೃದ್ಧಿ ಕಾರ್ಯಾಕ್ರಮದ ಅಡಿಯಲ್ಲಿ ಗ್ರಾಮಸ್ಥರಿಗೆ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿದ್ದು, ಉದ್ಘಾಟಿಸಿ ಪಂಚಾಯಿತಿ ಅಧೀನಕ್ಕೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಚಿಮಲ್ ನಿರ್ದೇಶಕ ಆರ್ ಶ್ರೀನಿವಾಸ್ ಮಾತನಾಡಿ, ಪಶುಗಳಿಗೆ ಆಹಾರ ತಯಾರು ಮಾಡುವಂತಹ ವಿರ್ಬ್ಯಾಕ್ ಕಂಪನಿ ತಮ್ಮ ಸಾಮಾಜಿಕ ಜವಾಬ್ದಾರಿಯೊಂದಿಗೆ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ ಬೇಕಾಗುವಂತಹ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ಶುದ್ಧ ನೀರಿನ ಘಟಕ, ಶೌಚಾಲಯ, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ಬಳಕೆ ಮಾಡುವುದು ಕಡಿಮೆ , ಅದನ್ನು ಉಪಯೋಗಿಸಲು ಮನವರಿಕೆ ಮಾಡುವಂತ ಕೆಲಸ ನಾವು ಮಾಡಬೇಕಾಗಿದೆ ಎಂದರು.
ಶುದ್ಧ ನೀರಿನ ಘಟಕಗಳು ರಾಜ್ಯದಲ್ಲಿ ಶೇ 70 ರಷ್ಟು ನಿರ್ಮಾಣವಾಗಿದ್ದು, ಇತ್ತೀಚೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಮೊದಲ ಆದ್ಯತೆ ಮೇರೆಗೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಹಾಲಿನ ಒಕ್ಕೂಟದಿಂದಲೂ ತಾಲ್ಲೂಕಿನ 8 ಗ್ರಾಮಗಳಿಗೆ ಶುದ್ಧ ನೀರಿನ ಘಟಕಗಳನ್ನು ಮಾಡಿದ್ದೇವೆ. ವಿರ್ಬ್ಯಾಕ್ ಕಂಪನಿಯಿಂದ ಶುದ್ಧ ನೀರಿನ ಘಟಕವನ್ನು ನಿರ್ಮಾಣ ಮಾಡಿ ಜನರ ಉಪಯೋಗಕ್ಕೆ ನೀಡಿರುವುದು ಸಂತಸದ ವಿಷಯ ಎಂದು ಶ್ಲಾಘಿಸಿದರು.
ವಿರ್ಬ್ಯಾಕ್ ಕಂಪನಿಯ ಜನರಲ್ ಮ್ಯಾನೇಜರ್ ದಿಲೀಪ್ ಮಾತನಾಡಿ, ಫ್ಲೋರೈಡ್ ಮಿಶ್ರಿತ ನೀರನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಇರುವುದರಿಂದ, ಅಧಿಕಾರಿಗಳ , ಜನ ಪ್ರತಿನಿಧಿಗಳ ಮತ್ತು ಇಲ್ಲಿನ ಗ್ರಾಮಸ್ಥರ ಸಹಕಾರದೊಂದಿಗೆ ನಮ್ಮ ವಿರ್ಬ್ಯಾಕ್ ಕಂಪನಿ ವತಿಯಿಂದ ಇಲ್ಲಿನ ಗ್ರಾಮಸ್ಥರಿಗೆ ಶುದ್ಧ ನೀರನ್ನು ನೀಡಲು ಘಟಕವನ್ನು ನಿರ್ಮಿಸಿದ್ದು, ಗ್ರಾಮದ ರೈತರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಘಟಕವನ್ನು ಉದ್ಘಾಟಿಸಿ ಪಂಚಾಯಿತಿ ಅಧೀನಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿರ್ಬ್ಯಾಕ್ ಮೇನೇಜರ್ ವೆಂಕಟರೆಡ್ಡಿ, ಪಶುವೈದ್ಯ ಡಾಕ್ಟರ್ ನವೀನ್ ಚಂದ್ರು, ಸಹಾಯಕ ನಿರ್ದೇಶಕ ಪಶು ಇಲಾಖೆ ಡಾಕ್ಟರ್ ರಮೇಶ್, ವಿರ್ಬ್ಯಾಕ್ ಅಧಿಕಾರಿಗಳಾದ ಹರೀಶ್, ಅಂಬರೀಶ್ , ಕೊತ್ತನೂರು ಪಂಚಾಯಿತಿ ಪಿಡಿಓ ಪವಿತ್ರ, ಡಿಮರ್ಸ್ ಮಂಜುನಾಥ್, ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ರವೀಂದ್ರ , ಚಂದ್ರಶೇಖರ್ ಹಾಜರಿದ್ದರು.