
Sidlaghatta : ಈ ಸಮಾಜದಲ್ಲಿ ಎಲ್ಲರಂತೆ ದಲಿತರು ಕೂಡ ಸ್ವಾಭಿಮಾನದಿಂದ ಬದುಕನ್ನು ನಡೆಸಬೇಕಾದರೆ ಎಲ್ಲ ದಲಿತ ಕುಟುಂಬಗಳಿಗೂ ಕೃಷಿ ಭೂಮಿ ಮಂಜೂರು ಮಾಡಿ ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಿವಿ ಕೇಳದಂತೆ, ಮಾತು ಬಾರದಂತೆ ವರ್ತಿಸುತ್ತಿದೆ ಎಂದು ದಸಂಸ ತಾಲ್ಲೂಕು ಸಂಚಾಲಕ ಚಲಪತಿ ಆರೋಪಿಸಿದರು.
ದಲಿತರ ಕಾಲೋನಿ, ಬಡಾವಣೆಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ, ಸ್ವಚ್ಚತೆಯಂತ ಕನಿಷ್ಠ ಸವಲತ್ತುಗಳನ್ನು ಒದಗಿಸಬೇಕು. ಬದುಕಿದ್ದಾಗ ಕೃಷಿ ಭೂಮಿ ಹಾಗೂ ಮನೆ, ಸತ್ತಾಗ ಹೂಳಲು ಸ್ಮಶಾನ ಜಾಗ ಒದಗಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ “ನೆಮ್ಮದಿಯ ಬದುಕಿಗಾಗಿ ಭೂಮಿ, ಘನತೆಯ ಬದುಕಿಗಾಗಿ ಒಂದು ಸೂರು”ಗಾಗಿ ಒತ್ತಾಯಿಸಿ ದಸಂಸ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬದುಕಿಗಾಗಿ ಕೃಷಿ ಭೂಮಿಯನ್ನು ಮಂಜೂರು ಮಾಡುವಂತೆ ದರಕಾಸ್ತು ಸಮಿತಿಗಳಿಗೆ ಅರ್ಜಿ ನಮೂನೆಗಳನ್ನು ಹಾಕಿಕೊಂಡು ತಾತ ಮುತ್ತಾತಂದಿರ ಕಾಲದಿಂದಲೂ ಅನುಭವದಲ್ಲಿದ್ದು ಕೃಷಿ ನಡೆಸುತ್ತಿದ್ದರೂ ಸರ್ಕಾರ ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಲ್ಲ.
ನಮ್ಮ ತಾಲ್ಲೂಕು ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿ ದರಕಾಸ್ತು ಸಮಿತಿಗಳನ್ನೆ ರಚಿಸಿಲ್ಲ. ರಚಿಸಿದ್ದರೂ ಪ್ರಭಾವಿಗಳು, ನಾಯಕರ ಹಿಂಬಾಲಕರಿಗೆ ಮಾತ್ರ ಒಂದಷ್ಟು ಜಮೀನು ಮಂಜೂರು ಮಾಡಿದ್ದಾರೆ ಹೊರತು ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಿಲ್ಲ ಎಂದು ದೂರಿದರು.
ಇದರಿಂದಾಗಿ ವರ್ಷಗಳಿಂದಲೂ ಭೂಮಿ ಮಂಜೂರು ಮಾಡುವಂತೆ ಕೋರಿದ ದಲಿತರ ಅರ್ಜಿಗಳು ಕೊಳೆಯುತ್ತಿವೆ. ಇನ್ನು ಜಮೀನುಗಳಿಗೆ ಸಂಬಂಧಿಸಿದಂತೆ ರೆಕಾರ್ಡ್ ರೂಂಗಳಲ್ಲಿ ರಿಯಲ್ ಎಸ್ಟೇಟ್ ಭೂ ಮಾಫಿಯಾದವರ ಮಾತಷ್ಟೆ ನಡೆಯುತ್ತದೆ ಎಂದು ಆರೋಪಿಸಿದರು.
ಪ್ರತಿಭಟನೆ, ಧರಣಿ, ಮೌನ ಮೆರವಣಿಗೆ ಸೇರಿ ನಾನಾ ರೀತಿಯಲ್ಲಿ ನಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದರೂ ಅಧಿಕಾರಿಗಳು, ಜನಪ್ರತಿನಿಗಳು ಕೊಟ್ಟ ಭರವಸೆಗಳು ಭರವಸೆಗಳಾಗಿ ಉಳಿದುಕೊಂಡಿವೆ ಹೊರತು ಅನುಷ್ಠಾನಕ್ಕೆ ಬರಲಿಲ್ಲ. ಹಾಗಾಗಿ ಮೂಲ ಸೌಕರ್ಯಗಳು ಇಂದಿಗೂ ಕೂಡ ಅನೇಕ ಕಡೆ ಗಗನ ಕುಸುಮವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜತೆಗೆ ದಲಿತರ ಮೇಲೆ ದೌರ್ಜನ್ಯಗಳು ನಡೆದರೂ ಅಗತ್ಯ ಕ್ರಮ ಕೈಗೊಳ್ಳಬೇಕಾದ ಸಮಯದಲ್ಲಿ ಜಿಲ್ಲಾಡಳಿತ ನಿರ್ಲಿಪ್ತ ಭಾವ ತಳೆದುಕೊಂಡು ಬಂದಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಬದಲಿಗೆ ಕಣ್ಣೊರೆಸುವ ಮತ್ತು ತಕ್ಷಣಕ್ಕೆ ಬೀಸೋ ದೊಣ್ಣೆಯಿಂದ ಪಾರಾಗುವಂತ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಹೊರತು ಸಮಸ್ಯೆ ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಶಿಡ್ಲಘಟ್ಟ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗಕ್ಕಾಗಿ 30 ವರ್ಷಗಳ ಸುದೀರ್ಘ ಹೋರಾಟ ನಡೆಸಬೇಕಾಯಿತು. ಇದೀಗ ಜಾಗ ಗುರ್ತಿಸಲಾಗಿದೆ. 10 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಿಸಬೇಕೆಂಬುದು ನಮ್ಮ ಬೇಡಿಕೆಯನ್ನು ಸರ್ಕಾರ ಎಷ್ಟರ ಮಟ್ಟಿಗೆ ಈಡೇರಿಸುತ್ತದೆಯೋ ಕಾದು ನೊಡಬೇಕೆಂದರು.
ದಲಿತರ ಮೇಲಿನ ದೌಜನ್ಯ ತಡೆಗೆ ಸೂಕ್ತ ಕ್ರಮವಹಿಸಬೇಕು, ದಲಿತರ ಕಾಲೋನಿಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು, ಬಗರ್ ಹುಕುಂ ಸಾಗುವಳಿಯಲ್ಲಿ ಕೃಷಿ ಜಮೀನು ಮಂಜೂರು ಮಾಡಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಾಲ್ಲೂಕು ಆಡಳಿತದ ಪರವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸದ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿಯ ಧರಣಿ ಮುಂದುವರೆದಿದೆ.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಾಂಸ್ಕೃತಿ ಸಂಚಾಲಕ ಬಿ.ವಿ ಆನಂದ್, ತಾಲ್ಲೂಕು ಸಂಘಟನಾ ಸಂಚಾಲಕ ಲಕ್ಕೆನಹಳ್ಳಿ ವೆಂಕಟೇಶ್, ಹುಜಗೂರು ವೆಂಕಟೇಶ್ , ಈ ತಿಮ್ಮಸಂದ್ರ ಗಂಗಾಧರ್, ತಾಲ್ಲೂಕು ಮಹಿಳಾ ಸಂಚಾಲಕಿ ಶಶಿಕಲಾ ನರಸಿಂಹರಾಜು, ಮುಖಂಡರಾದ ಜಿ.ನರಸಿಂಹಮೂರ್ತಿ, ಎನ್ ಟಿ ಆರ್ ನರಸಿಂಹ, ಮಟ್ಟಿ ನಾರಾಯಣಸ್ವಾಮಿ, ಮುತ್ತೂರು ರಾಮಕೃಷ್ಣಪ್ಪ, ಡಿ.ಎಂ.ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳಾ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.