Sidlaghatta : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುಣಾವಣೆ ಸಮಯದಲ್ಲಿ ಮಾತ್ರವೇ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ಯುವಜನರನ್ನು ಸ್ಮರಿಸುತ್ತದೆ. ನಂತರ ಮರೆಯುವ ಸರ್ಕಾರಗಳಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ದುಡಿಯುವ ವರ್ಗದ ಎಲ್ಲರೂ ಸೇರಿ ಕಲಿಸಬೇಕಾಗುತ್ತದೆ ಎಂದು ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾ ಉಪಾಧ್ಯಕ್ಷ ತಿಮ್ಮನಾಯಕಹಳ್ಳಿ ಅರುಣ್ ಕುಮಾರ್ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಕೂಲಿ ಕಾರ್ಮಿಕ ಮಹಿಳಾ ಮತ್ತು ಯುವ ವಿರೋ ನೀತಿಗಳನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೋಮವಾರದಿಂದ ಹಮ್ಮಿಕೊಂಡಿರುವ 72 ಗಂಟೆಗಳ ಅಹೋರಾತ್ರಿ ಧರಣಿಗೆ ಶಿಡ್ಲಘಟ್ಟದಿಂದ ತೆರಳಿದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಎಪಿಎಂಸಿ ಕಾಯಿದೆ ಜಾರಿ ಮಾಡಿದಾಗ ರೈತರು ನಡೆಸಿದ ಪ್ರತಿಭಟನೆ ಸಮಯದಲ್ಲಿ ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ಅದು ಸಾಧ್ಯವಾಗಲಿಲ್ಲ.
ಜತೆಗೆ ಆಗ ವಿರೋಧ ಪಕ್ಷದಲ್ಲಿದ್ದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ನಾವು ಅಧಿಕಾರಕ್ಕೆ ಬಂದರೆ ತಕ್ಷಣ ಎಪಿಎಂಸಿ ಕಾಯಿದೆಯನ್ನು ರದ್ದುಪಡಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಇದೀಗ ಅಧಿಕಾರಕ್ಕೆ ಬಂದಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕೂಲಿ ಕಾರ್ಮಿಕರು, ಮಹಿಳೆಯರು, ಯುವಜನರ ವಿರೋಧಿ ನೀತಿಗಳನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಾನಾ ಸಂಘಟನೆಗಳು ಸೇರಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ 72 ಗಂಟೆಗಳ ಕಾಲ ಅಹೋರಾತ್ರಿ ಧರಣಿಯನ್ನು ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಶಿಡ್ಲಘಟ್ಟದಿಂದ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ನಾನಾ ಸಂಘಟನೆಗಳಿಂದ ಬೆಂಗಳೂರಿಗೆ ಧರಣಿಯನ್ನು ಭಾಗವಹಿಸಲು ತೆರಳಿದರು. ರೈತ ಸಂಘದ ರವಿಪ್ರಕಾಶ್, ಕೋಟೆ ಚನ್ನೇಗೌಡ, ಮಾರುತಿ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.