Sidlaghatta : ಶಿಡ್ಲಘಟ್ಟ ತಾಲ್ಲುಕಿನ ಮಳ್ಳೂರಿನಲ್ಲಿ (Mallur) ಮಂಗಳವಾರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ (Freedom Fighter) ನಾಗಪ್ಪ ಅವರ 100 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಳ್ಳೂರು ನಾಗಪ್ಪ (Mallur Nagappa) ಅವರಿಗೆ ಶುಭಾಶಯ ಕೋರುವ ಜೊತೆಗೆ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿ ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ಅವರು ಮಾತನಾಡಿದರು.
ಮಳ್ಳೂರು ನಾಗಪ್ಪ ಅವರು ದೇಶಭಕ್ತರಹಳ್ಳಿಯೆಂದೇ ಹೆಸರಾದ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ನಡೆದ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅಂದಿನ ದೇಶಪ್ರೇಮಿಗಳ ಮೇಲೆ ಬ್ರಿಟಿಷರು ನಡೆಸಿದ ಗೋಲಿಬಾರ್ ಅನ್ನು ವಿರೋಧಿಸಿದವರು. ಬಾಲ್ಯದಿಂದಲೇ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟ ನೇತಾರರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದವರು. ನಂದಿಗಿರಿಧಾಮಕ್ಕೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದಾಗ ಅತ್ಯಂತ ಹುರುಪಿನಿಂದ ಬಾಪೂಜಿಯವರನ್ನು ಭೇಟಿಯಾದವರು ಮಳ್ಳೂರು ನಾಗಪ್ಪ. ಗಾಂಧಿ ಟೋಪಿ ಧರಿಸಿ ಅವರ ಆದರ್ಶದಲ್ಲೇ ಸರಳ ಬದುಕು ಸವೆಸುತ್ತಿರುವ ಸಜ್ಜನಿಕೆಯ ವ್ಕಕ್ತಿತ್ವದ ಹಿರಿಯ ಚೇತನ ಎಂದು ಗುಣಗಾನ ಮಾಡಿದರು.
ಮಳ್ಳೂರು ನಾಗಪ್ಪ ಅವರಂತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿನ ದೇಶಭಕ್ತಿ ಮತ್ತು ದೇಶಪ್ರೇಮ ಹಾಗೂ ಹೋರಾಟದ ಗುಣ ಇಂದಿನ ಯುವಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶವಾಗಬೇಕು ಎಂದು ಅವರು ತಿಳಿಸಿದರು.
ಶಾಸಕ ವಿ.ಮುನಿಯಪ್ಪ, ಜಿ.ಎಂ.ರಾಮರೆಡ್ಡಿ, ರತ್ನಮ್ಮ, ಶ್ರೀನಿವಾಸ್ ರೆಡ್ಡಿ, ನಳಿನಾ, ನಟರಾಜ್, ಶಿವಕುಮಾರ್, ಶೋಭಾ, ವಿಹಾನ್ ಗೌಡ , ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ, ತಹಶೀಲ್ದಾರ್ ಬಿ.ಎಸ್.ರಾಜೀವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್ ಹಾಜರಿದ್ದರು.