Sidlaghatta : ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಡುಮಕ್ಕಳಿಗೆ ಶೌಚಾಲಯವಿಲ್ಲದೆ ಮಕ್ಕಳು ಬಯಲಿಗೆ ಹೋಗುವ ಪರಿಸ್ಥಿತಿಯಿದೆ. ಗಂಡು ಮಕ್ಕಳ ಶೌಚಾಲಯವನ್ನು ಪೂರ್ಣಗೊಳಿಸದೇ ಬೀಗ ಜಡಿದಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ಸಾಲಿಗಿಂತ ಈ ಬಾರಿ ಸುಮಾರು 25 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ದಾಖಲಗಿದ್ದು, ಒಟ್ಟಾರೆ 60 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಗಂಡು ಮಕ್ಕಳು ಸಾಲಾಗಿ ಬೆನ್ನ ಹಿಂದೆ ಕೈಕಟ್ಟಿಕೊಂಡು ಪೆರೇಡ್ ಗೆ ಹೋಗುವ ರೀತಿಯಲ್ಲಿ ಗ್ರಾಮದಲ್ಲಿ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದು, ಮೂತ್ರ ವಿಸರ್ಜನೆಗೆ ಹೋಗುವ ಸ್ಥಳ ಗಿಡಗಂಟೆಗಳಿಂದ ಕೂಡಿದ ಪಾರ್ಥೇನಿಯಂ ವನವಾಗಿದೆ. ಸ್ಥಳದಲ್ಲಿ ಕ್ರಿಮಿಕೀಟಗಳೋ ಅಥವಾ ಹುಳುಹುಪ್ಪಟೆಯೋ ಕಡಿದು ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅದನ್ನು ಪಿಟ್ ಗೆ ಸಂಪರ್ಕ ಕೊಡದಿರುವುದರಿಂದ ಬೀಗ ಹಾಕಲಾಗಿದೆ. ನರೇಗಾ ಯೋಜನೆಯಡಿ 17 ಸಾವಿರ ರೂ ವೆಚ್ಚದಲ್ಲಿ ಮಕ್ಕಳು ಕೈ ತೊಳೆಯುವ ನೀರು ಹರಿದು ಹೋಗಲು ಸೋಪ್ ಪಿಟ್ ಅನ್ನು ಮಾಡಲಾಗಿದೆ ಎಂದು ಫಲಕವನ್ನು ಹಾಕಲಾಗಿದೆ. ಆದರೆ ಸಂಪೂರ್ಣ ಪೂರ್ಣಗೊಳಿಸದಿರುವುದರಿಂದ ತ್ಯಾಜ್ಯದ ನೀರು ಶಾಲೆಯ ಮುಂದೆಯೇ ಹರಿದು ಹೋಗುತ್ತಿದೆ. ಮಕ್ಕಳು ಅದನ್ನು ತುಳಿದುಕೊಂಡೇ ಹೋಗುವ ಪರಿಸ್ಥಿತಿಯಿದೆ.
ಶಿಕ್ಷಕ ಮಂಜುನಾಥ್ ಮಾತನಾಡಿ “ನಾವು ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಜೊತೆಗೂಡಿ ಮಕ್ಕಳ ದಾಖಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ನಮ್ಮ ಶಾಲೆಯಲ್ಲಿ ಗಂಡುಮಕ್ಕಳ ಶೌಚಾಲಯವನ್ನು ಪೂರ್ಣಗೊಳಿಸಿ ಅದರ ಬೀಗವನ್ನು ಕೊಡಿ ಎಂದು ಗ್ರಾಮ ಪಂಚಾಯಿತಿಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಶಾಲೆಯ ಗಂಡು ಮಕ್ಕಳು ಮೂತ್ರ ವಿಸರ್ಜಿಸಲು ಬಯಲಿಗೆ ಹೋಗಬೇಕಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಮಗಿಲ್ಲಿ ಸೋಪ್ ಪಿಟ್, ಗಂಡುಮಕ್ಕಳ ಶೌಚಾಲಯ ಮತ್ತು ಕಾಂಪೌಂಡ್ ಅನ್ನು ಗ್ರಾಮ ಪಂಚಾಯಿತಿಯವರು ತ್ವರಿತವಾಗಿ ಪೂರ್ಣಗೊಳಿಸಿ ಕೊಡಬೇಕು” ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಪಿಡಿಒ ಸುಧಾಮಣಿ “ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲವೆಂದು ಯಾರೂ ನನ್ನ ಗಮನಕ್ಕೆ ತಂದಿಲ್ಲ. ಇತ್ತೀಚೆಗಷ್ಟೇ ನಾನು ಈ ಪಂಚಾಯಿತಿಗೆ ಬಂದಿರುವುದರಿಂದ್ದ, ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur