Sidlaghatta : ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ದೂರದೃಷ್ಠಿ ಯೋಜನಾ ಪ್ರಕ್ರಿಯೆಗಳ ಪೂರ್ವಭಾವಿ ತರಬೇತಿ” ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಯೋಜನಾ ತಂಡ ರಚಿಸಿ ಸದಸ್ಯರ ಪಾತ್ರದ ಕುರಿತು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಎಸ್.ಮಧು ಮಾತನಾಡಿದರು.
ಗ್ರಾಮಗಳ ಅಭಿವೃದ್ದಿಯ ಬಗ್ಗೆ ಪಂಚಾಯಿತಿ ಸದಸ್ಯರಿಗೆ ಕಾಳಜಿ ಇಲ್ಲವಾದಲ್ಲಿ ಸರ್ಕಾರಗಳು ಎಷ್ಟೇ ಅಧಿಕಾರ ವಿಕೇಂದ್ರಿಕರಣ ಮಾಡಿದರೂ ಅಭಿವೃದ್ದಿಯಾಗುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮಗಳ ಅಭಿವೃದ್ದಿಯ ಬಗ್ಗೆ ಕನಸ್ಸು ಹಾಗು ಕನಸ್ಸನ್ನು ನನಸು ಮಾಡುವ ಛಲವಿದ್ದಾಗ ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸ್ಸು ನನಸಾಗಲು ಸಾಧ್ಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆಯ ನಂತರ ಹೊಸ ಸದಸ್ಯರು ಆಯ್ಕೆಯಾಗಿ ಬಂದ ಮೇಲೆ 3 ತಿಂಗಳ ಒಳಗಾಗಿ ಮುಂದಿನ 5 ವರ್ಷಗಳ ಅವಧಿಯ ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನೆಯನ್ನು ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ದಿಯ ದೃಷ್ಠಿಯಿಂದ ತಯಾರಿಸಬೇಕಾಗಿದೆ. ಎಫ್ ಇ ಎಸ್ ಸಂಸ್ಥೆಯ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಒಳಗೊಂಡಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಿವಿಧ ಇಲಾಖಾ ಅಧಿಕಾರಿಗಳು/ಪ್ರತಿನಿಧಿಗಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕಾರಿಗಳಾದ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾಂತ್ರಿಕ ಸಹಾಯಕರು, ಜಲಗಾರರು, ವಿಕಲಚೇತನರ ಗ್ರಾಮೀಣ ಪುರ್ನವಸತಿ ಕಾರ್ಯಕರ್ತರು, ಸಂಜೀವಿನಿ ಕಾರ್ಯಕರ್ತರು ಒಳಗೊಂಡಂತೆ ಗ್ರಾಮ ಪಂಚಾಯಿತಿ ಮಟ್ಟದ “ಗ್ರಾಮ ಪಂಚಾಯಿತಿ ಯೋಜನಾ ತಂಡವನ್ನು ರಚನೆ ಮಾಡಿ ಸಮುದಾಯ ಸಹಬಾಗಿತ್ವದೊಂದಿಗೆ ಗ್ರಾಮೀಣ ಸಹಬಾಗಿತ್ವ ಅಧ್ಯಯನದ ಮೂಲಕ ಗ್ರಾಮ ಪಂಚಾಯಿತಿ ದೂರ ದೃಷ್ಠಿ ಯೋಜನೆಯನ್ನು ತಯಾರಿಸಲಾಗುತ್ತಿದೆ ಎಂದರು.
ಪೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದ ಎನ್.ರಮೇಶ್ ಮಾತನಾಡಿ ಸಮುದಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಇದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿ ಮಾಡುವುದು ಮುಖ್ಯವಾಗಿದ್ದು ಕಲಾ ಜಾಥಾ, ಗೋಡೆಬರಹ, ಕೈಪತ್ರ ಹಂಚುವಿಕೆ, ಬಿತ್ತಿಪತ್ರ ಮತ್ತು ಡಂಗೋರ ಹಾಗೂ “ಗ್ರಾಮ ಪಂಚಾಯಿತಿ ಯೋಜನಾ ತಂಡ ಸದಸ್ಯರ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಗ್ರಾ.ಪಂ ದೂರದೃಷ್ಠಿ ಯೋಜನೆಯಲ್ಲಿ ಪ್ರಮುಖ ವಲಯಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ, ಸಾಮಾಜಿಕ ಭಧ್ರತೆ ಯೋಜನೆಗಳು, ಜೀವನೋಪಾಯ ಚಟುವಟಿಕೆಗಳ ಅಭಿವೃದ್ಧಿ ಮುಂತಾದ ವಲಯಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ ಸಾಮಾಜಿಕ ಭದ್ರತೆ ಯೋಜನೆಯಡಿ ವಯೋವೃದ್ದರಿಗೆ ಮತ್ತಷ್ಟು ಸೇವೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಕಲ್ಪಿಸುವಂತಾಗಬೇಕು. ಸಮುದಾಯದ ಸಹಕಾರದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ ಹಾಗು ಸ್ಮಶಾನಗಳನ್ನು ಗುರುತಿಸಿ ಪಂಚಾಯಿತಿಯ ಭೂಧಾಖಲೆವಹಿಯಲ್ಲಿ ನಮೂದಿಸುವುದು ಸೇರಿದಂತೆ ಆಸ್ತಿಗಳ ಸಂರಕ್ಷಣೆ ಹಾಗು ಗ್ರಾಮಗಳ ಅಭಿವೃದ್ದಿ ಮತ್ತು ನಿರ್ವಹಣೆ ಮಾಡಲು ಕಾರ್ಯಯೋಜನೆ ರೂಪಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮುನಿರೆಡ್ಡಿ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಹಿರಿಯ ಸದಸ್ಯ ಜಯರಾಮ್, ಕಾರ್ಯದರ್ಶಿ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ವಿ.ಎಲ್ ಮಧು, ಮುನಿರಾಜ ಬಿಎನ್, ಮಾಲಾವತಿ, ಕಳಾವತಿ, ಸಮುದಾಯ ಸಂಪನ್ಮೂಲ ವ್ಯಕ್ತಿ ದೇವರಾಜ್, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರು, ಜಲಗಾರರು ಹಾಜರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur