Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ವತಿಯಿಂದ ಪೌಢಶಾಲಾ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ್ದ “ಕರ್ನಾಟಕ ಏಕೀಕರಣ ಇತಿಹಾಸ” ದ ಬಗ್ಗೆ ಪ್ರಬಂಧ ಸ್ಪಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಮಾತನಾಡಿದರು.
ಐದು ಭೂ ಭಾಗಗಳಾಗಿ ಹಂಚಿಹೋಗಿದ್ದ ಕನ್ನಡಿಗರನ್ನು ಜಾಗೃತಗೊಳಿಸಿದವರು ಕನ್ನಡ ಕುಲ ಪುರೋಹಿತರೆಂದೇ ಹೆಸರಾದ ಆಲೂರು ವೆಂಕಟರಾಯರು ಎಂದು ತಿಳಿಸಿದರು.
ಆಲೂರು ವೆಂಕಟರಾಯರು ಕನ್ನಡ ಭಾಷೆಯನ್ನಾಡುವ ಪ್ರದೇಶಗಳು ಐದು ಭೂ ಭಾಗಗಳಾಗಿ ಹಂಚಿ ಹೋಗಿರುವುದನ್ನು ನೆನೆದು ವ್ಯಥೆಪಟ್ಟರು. ಕನ್ನಡ ಭೂಮಿಯನ್ನು ಏಕೀಕರಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಕನಸನ್ನು ಕಂಡರು. 13 ವರ್ಷಗಳ ಕಾಲ ಕನ್ನಡ ಭಾಷೆಯನ್ನಾಡುತ್ತಿದ್ದ ಅಷ್ಟೂ ಪ್ರದೇಶಗಳ ತುಂಬಾ ಪ್ರವಾಸ ಮಾಡಿದರು. ಕರ್ನಾಟಕ ಜಾನಪದ, ಇತಿಹಾಸ, ಕಲೆ, ಸಂಗೀತ, ದೇವಾಲಯಗಳು, ವಾಣಿಜ್ಯ ವ್ಯವಹಾರ, ಸಾಹಿತ್ಯ ಮತ್ತು ಭಾಷೆಯನ್ನು ವಿಸ್ತೃತವಾಗಿ ವಿವರಿಸುವ “ಕರ್ನಾಟಕ ಗತವೈಭವ” ಮಹಾಗ್ರಂಥ ಬರೆದು ಪ್ರಕಟಿಸಿದರು. ಈ ಕೃತಿಯು ಐದು ಭೂ ಭಾಗಗಳಾಗಿ ಹಂಚಿಹೋಗಿದ್ದ ಕನ್ನಡಿಗರನ್ನು ಜಾಗೃತಗೊಳಿಸಿತು. ನಂತರ 12 ಪುಸ್ತಕ ಗಳು ಮತ್ತು ಎಂಟು ಕಿರು ಪುಸ್ತಕ ಗಳನ್ನು ಬರೆದರು.
ಪುಸ್ತಕಗಳನ್ನು ತಾವೇ ಪ್ರಕಟಿಸಿ, ತಲೆ ಮೇಲೆ ಹೊತ್ತು ಊರೂರು ಸುತ್ತಿ ಮಾರಿದರು. ಆಲೂರು ವೆಂಕಟರಾಯರ ಐದು ದಶಕಗಳ ಹೋರಾಟದ ನಂತರ ಕರ್ನಾಟಕ ಏಕೀಕರಣವಾಯಿತು. ಅವರನ್ನು ಕನ್ನಡದ ಕುಲ ಪುರೋಹಿತ ಎಂದು ಕರೆಯುತ್ತಾರೆ. ಆಲೂರು ವೆಂಕಟರಾಯರ ಐದು ದಶಕಗಳ ಹೋರಾಟದ ಅರಿವಾಗಬೇಕಾದರೆ ಅವರ “ನನ್ನ ಜೀವನದ ಸ್ಮೃತಿಗಳು” ಎನ್ನುವ ಪುಸ್ತಕ ವನ್ನು ಕನ್ನಡಿಗರು ಓದಬೇಕು. ಅವರ ಹೋರಾಟದ ಕಾಲ ಘಟ್ಟ ಕಣ್ಣ ಮುಂದೆ ನಿಲ್ಲುತ್ತದೆ ಎಂದರು.
“ನಾನು ಕನ್ನಡಿಗ, ಕರ್ನಾಟಕ ನನ್ನದು ಎಂಬ ಸದ್ವಿಚಾರ ತರಂಗಗಳಂದ ಯಾವನ ಹೃದಯವು ಪುಳಕಿತಗೊಳ್ಳುವುದುಲ್ಲವೋ, ಇಂತಹ ವಿಷಮ ಸ್ಥಿತಿಯಲ್ಲಿ ಹೃದಯವು ತಲ್ಲಣಿಸುವುದಿಲ್ಲವೋ, ರೋಮರಂದ್ರಗಳಲ್ಲಿ ಕೂಡ ಕರ್ನಾಟಕವೆಂದು ಸೊಲ್ಲು ಹೊರಡುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ, ದೇಹವಲ್ಲ, ಮೋಟು ಮರ !” ಎಂದು ಆಲೂರು ವೆಂಕಟರಾಯರು ಸದಾ ಭಾಷಣಗಳಲ್ಲಿ ಹೇಳತ್ತಿದ್ದರು ಎಂದು ವಿವರಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎನ್.ಅಮೃತಕುಮಾರ್ ಮಾತನಾಡಿ, ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು, ನಮ್ಮ ಭಾಷೆಯ ಮಹತ್ವವನ್ನು ಎಲ್ಲಾ ಕಡೆಯೂ ಸಾರಬೇಕು, ಕನ್ನಡ ಭಾಷೆ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದರು.
ಕರ್ನಾಟಕ ಏಕೀಕರಣ ಇತಿಹಾಸದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿಧ್ಯಾರ್ಥಿಗಳಾದ ವಿನೋದ ಕುಮಾರ್ ಬಿ.ಕೆ ( ಪ್ರಥಮ ) , ಮೀನಾ ಆರ್ (ದ್ವಿತೀಯ ) , ಶ್ರೀವಾಣಿ ಕೆ.ಎಂ. (ತೃತೀಯ ) ಅವರಿಗೆ ಕಸಾಪ ವತಿಯಿಂದ ಬಹುಮಾನವಾಗಿ ಪುಸ್ತಕ. ಪ್ರಮಾಣಪತ್ರ ಮತ್ತು ಪೆನ್ ನೀಡಿ ಪ್ರೋತ್ಸಾಹಿಸಲಾಯಿತು.
ತಾಲ್ಲೂಕು ಕಸಾಪ ಗೌ.ಕಾರ್ಯದರ್ಶಿ ಕೆ.ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸಾಹಿತಿ ಚಂದ್ರಶೇಖರ ಹಡಪದ್, ಪ್ರಾಂಶುಪಾಲ ಮೂರ್ತಪ್ಪ, ಶಿಕ್ಷಕರಾದ ಶಿವಚಂದ್ರ ಕುಮಾರ್, ಮಂಜುನಾಥ್ ಎ, ವೆಂಕಟಸ್ವಾಮಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.